ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ವಿರುದ್ಧ ಭೂವ್ಯಾಜ್ಯ ಲಂಚ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಕಟುವಾಗಿ ಟೀಕೆ ಮಾಡಿದ್ದ ಹೈಕೋರ್ಟ್, ಈಗ ಎಸಿಬಿ ಎಡಿಜಿಪಿಯಾಗಿರುವ ಸೀಮಂತ್ ಕುಮಾರ್ ಸಿಂಗ್ ಅವರು ಈ ಹಿಂದೆ ಬಳ್ಳಾರಿಯಲ್ಲಿ ಎಸ್ಪಿಯಾಗಿದ್ದಾಗ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ತನಿಖಾ ವರದಿ ಸಲ್ಲಿಸುವಂತೆ ಎಸಿಬಿಗೆ ನಿರ್ದೇಶನ ನೀಡಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿರುದ್ಧದ ಲಂಚ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಎಡಿಜಿಪಿ ವಿರುದ್ಧ ಅನುಮಾನ ಬರಲು ಹಲವಾರು ಕಾರಣಗಳಿವೆ. ಅವರಿಗೆ 'ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ' ಎಂದು ಖಾರವಾಗಿ ತಿಳಿಸಿದರು.
ಸೀಮಂತ್ ಕುಮಾರ್ ಸಿಂಗ್ ಅವರು 2013 ರ ಏಪ್ರಿಲ್ನಲ್ಲಿ ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪದ ಮೇಲೆ ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿ ತನಿಖೆ ನಡೆಸಿದೆ. ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ತಮ್ಮ ಅಧೀನ ಅಧಿಕಾರಿಗಳ ಮೂಲಕ ಗಣಿ ಕಂಪನಿಗಳ ಮಾಲೀಕರಿಂದ ಮಾಮೂಲು ವಸೂಲು ಮಾಡಿಸುತ್ತಿದ್ದರು. ಸ್ವಸ್ತಿಕ್ ನಾಗರಾಜ್ ಎನ್ನುವರಿಂದ 3 ಲಕ್ಷ ರೂಪಾಯಿ ಪಡೆದ ಬಗ್ಗೆ ಆರೋಪಗಳಿವೆ. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ತನಿಖೆ ನಡೆಸುತ್ತಿರುವ ಸಿಬಿಐ, ಸೀಮಂತ್ ಕುಮಾರ್ ಸಿಂಗ್ ಅವರ ಬಗ್ಗೆ ಯಾವುದೇ ಕ್ರಮಕ್ಕೆ ಸೂಚಿಸಿಲ್ಲ. ಈ ಬಗೆಗಿನ ಸಿಬಿಐ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ನ್ಯಾಯಮೂರ್ತಿಗಳು ಸಿಬಿಐ ಪರ ವಕೀಲರಿಗೆ ಆದೇಶಿಸಿದರು.
ಆಕ್ಷೇಪಾರ್ಹ ಟೀಕೆಗಳ ರದ್ದತಿಗೆ ಮನವಿ: ಭೂವ್ಯಾಜ್ಯಕ್ಕೆ ಸಂಬಂಧಿಸಿದ ಲಂಚ ಪ್ರಕರಣದ ಆರೋಪಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ತಮ್ಮ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಅವರು ಮಾಡಿರುವ ಟೀಕೆಗಳನ್ನು ರದ್ದುಪಡಿಸುವಂತೆ ಕೋರಿ ಸೀಮಂತ್ ಕುಮಾರ್ ಸಿಂಗ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಹುದ್ದೆಯಲ್ಲಿ ಹೆಚ್ಚಿನ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಅರ್ಜಿಯಲ್ಲಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ತಮ್ಮ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿಗಳು ಮಾಡಿರುವ ಮೌಖಿಕ ಟೀಕೆಗಳನ್ನು ತೆಗೆದುಹಾಕಬೇಕು ಮತ್ತು ತಮ್ಮ ಸೇವಾ ದಾಖಲೆಯನ್ನು ಸಲ್ಲಿಸಲು ನೀಡಿರುವ ಆದೇಶವನ್ನು ರದ್ದುಪಡಿಸಬೇಕೆಂದು ಅವರು ಕೋರಿದ್ದಾರೆ.