ಬೆಂಗಳೂರು: ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆದಲ್ಲಿ ಆಡಳಿತ ಯಂತ್ರದ ಸುಗಮ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ. ಈ ಚುನಾವಣೆಗಳಿಂದ ಕೆಲವು ವ್ಯತ್ಯಾಸಗಳು ಆಗಬಹುದು. ಆದರೆ, ಒಟ್ಟಾರೆ ದೇಶದ ಪ್ರಗತಿಯ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭೆಯಲ್ಲಿ ಇಂದು ' ಒಂದು ದೇಶ, ಒಂದು ಚುನಾವಣೆ' ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆಯ ನಡುವೆ ಸ್ಪೀಕರ್ ಭಾಷಣ ಮುಗಿದ ತಕ್ಷಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಒಂದು ದೇಶ ಒಂದು ಚುನಾವಣೆ ಎಂಬುದು ಪ್ರಗತಿಪರ ಆಲೋಚನೆ. ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಭಾರತದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಯುವ ಪದ್ಧತಿ ಅನುಷ್ಠಾನಕ್ಕೆ ಬರಲಿ. ಅನಗತ್ಯ ಖರ್ಚು, ವೆಚ್ಚಗಳು ಮತ್ತು ಮಾನವ ದಿನಗಳ ಉಳಿತಾಯ ಇದರಿಂದ ಸಾಧ್ಯವಾಗಲಿದೆ ಎಂದು ಸಿಎಂ ಹೇಳಿದರು.
ಎಲ್ಲಾ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಸಂಸತ್ತಿನ ಉಭಯ ಸದನಗಳಲ್ಲಿ ಹಾಗೂ ರಾಜ್ಯದ ವಿಧಾನಮಂಡಲಗಳಲ್ಲಿ ಚಿಂತನ-ಮಂಥನ ನಡೆಸಿದರೆ ಮಾತ್ರ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ನಿಯಮ ಜಾರಿಗೆ ಬಂದರೆ ಕೆಲವು ರಾಜಕೀಯ ಹೊಂದಾಣಿಕೆ ಅನಿವಾರ್ಯವಾಗುವುದು. ಲೋಕಸಭೆ- ವಿಧಾನಸಭೆಗಳ ಅವಧಿಯಲ್ಲಿ ಏರಿಳಿತಗಳಾಗಬಹುದು. ಇವೆಲ್ಲ ಪ್ರಾರಂಭಿಕ ಅಡಚಣೆಗಳಾಗಿದ್ದು, ಇವೆಲ್ಲವನ್ನೂ ಮೀರಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.