ಕರ್ನಾಟಕ

karnataka

ETV Bharat / city

CRPC ಸೆಕ್ಷನ್ 41ಎ ಅಡಿ ನೋಟಿಸ್ ನೀಡಿದಾಗ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್ - ಸಿಆರ್‌ಪಿಸಿ ಸೆಕ್ಷನ್‌ 41ಎ

ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದಾಗ, ನೋಟಿಸ್ ಪಡೆದ ವ್ಯಕ್ತಿಗೆ ಬಂಧನ ಭೀತಿ ಇರುತ್ತದೆ. ಇಂತಹ ವ್ಯಕ್ತಿಗಳಿಗೆ ಹೈಕೋರ್ಟ್‌ ಸಣ್ಣ ರಿಲೀಫ್‌ ನೀಡಿದೆ. CRPC ಸೆಕ್ಷನ್ 41ಎ ಅಡಿ ನೋಟಿಸ್ ನೀಡಿದಾಗ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್‌ ಆದೇಶ ನೀಡಿದೆ.

If get a notice Under CRPC Section 41 A ; Chance to apply for Anticipatory bail; high court
CRPC ಸೆಕ್ಷನ್ 41ಎ ಅಡಿ ನೋಟಿಸ್ ನೀಡಿದಾಗ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್

By

Published : Jun 26, 2021, 10:58 PM IST

ಬೆಂಗಳೂರು:ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 41 (ಎ) ಅಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದಾಗ, ನೋಟಿಸ್ ಪಡೆದ ವ್ಯಕ್ತಿಗೆ ಬಂಧನ ಭೀತಿ ಇರುತ್ತದೆ. ಇಂಥ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸುವ ಅರ್ಜಿಯನ್ನು ನ್ಯಾಯಾಲಯಗಳು ತಳ್ಳಿಹಾಕುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.


ಕರ್ನಾಟಕ ಅರಣ್ಯ ಕಾಯ್ದೆಯ ನಿಯಮ ಉಲ್ಲಂಘನೆ ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬಾಗಲಕೋಟೆಯ ರಾಮಪ್ಪ ಎಂಬಾತನಿಗೆ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ರಾಮಪ್ಪ ನಿರೀಕ್ಷಣಾ ಜಾಮೀನು ಕೋರಿ ಬಾಗಲಕೋಟೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಮಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾ.ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ಪೀಠ, ರಾಮಪ್ಪನಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅರ್ಜಿದಾರ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಒಬ್ಬರು ವ್ಯಕ್ತಿಯ ಭದ್ರತಾ ಖಾತರಿ ನೀಡಬೇಕು. 15 ದಿನಗಳಲ್ಲಿ ತನಿಖಾಧಿಕಾರಿ ಎದುರು ಹಾಜರಾಗಬೇಕು. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಯಾವುದೇ ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂದು ಷರತ್ತು ವಿಧಿಸಿದೆ.

ಇದನ್ನೂ ಓದಿ: ಸೋಮವಾರದಿಂದ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ಆರಂಭ: ಹೈಕೋರ್ಟ್​ ಮಾರ್ಗಸೂಚಿ ಬಿಡುಗಡೆ

ಕೋರ್ಟ್ ಹೇಳಿದ್ದೇನು?
ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಜಾರಿಗೊಳಿಸಿದಾಗ, ನೋಟಿಸ್ ನಂತರ ವಿಚಾರಣೆ ಪ್ರಕ್ರಿಯೆ ರ್ಪೂಣಗೊಂಡು ಆತನನ್ನು ಬಂಧಿಸಬೇಕಾಗುತ್ತದೆಂಬ ನಿರ್ಧಾರಕ್ಕೆ ತನಿಖಾಧಿಕಾರಿ ಬರುತ್ತಾರೆ. ಅಥವಾ ನೋಟಿಸ್ ನಿಯಮಗಳನ್ನು ಪಾಲನೆ ಮಾಡದಿರುವಾಗ ಅಥವಾ ಪ್ರಕರಣದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಬಯಸದಿರುವಾಗ ನೋಟಿಸ್ ಪಡೆದ ವ್ಯಕ್ತಿ ಬಂಧನದ ಭೀತಿ ಎದುರಿಸುತ್ತಾನೆ. ಈ ಎಲ್ಲ ಸಂದರ್ಭಗಳಲ್ಲಿ ನೋಟಿಸ್ ಪಡೆದ ವ್ಯಕ್ತಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

ಹಾಗೆಯೇ, ಸೆಕ್ಷನ್ 41ಎ ಅಡಿ ನೋಟಿಸ್ ಜಾರಿ ಮಾಡಿದಾಗ ಯಾವ ಕಾರಣಕ್ಕಾಗಿ ವಿಚಾರಣೆಗೆ ಹಾಜರಾಗಬೇಕು ಎಂಬ ಮಾಹಿತಿ ಉಲ್ಲೇಖಿಸದಿದ್ದಾಗ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಸೆಕ್ಷನ್ 41ಎ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಓರ್ವ ವ್ಯಕ್ತಿಯನ್ನು ಬಂಧಿಸುವ ಬದಲು ಖುದ್ದು ಹಾಜರಿಗೆ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಬಹುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಬಹುದು.

ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗುವವರೆಗೆ ಯಾವುದೇ ವ್ಯಕ್ತಿಯನ್ನು ಬಂಧಿಸದಂತೆ ಸೆಕ್ಷನ್ 41ಎ ತಡೆಯುತ್ತದೆ. ಆದರೆ, 41ಎ ಅಡಿ ನೋಟಿಸ್ ಜಾರಿಯಾದಾಗ ಆತನಿಗೆ ಬಂಧನ ಭೀತಿ ಇದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಇಂತಹ ಸಂದರ್ಭಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸುವ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆಗೆ ಪರಿಗಣಿಸದೇ ನಿರಾಕರಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಗ್ರಾಮೀಣ ಭಾಗಗಳಲ್ಲಿ Network ಸಮಸ್ಯೆ ನಿವಾರಿಸಿ: ಐಟಿ ಸಚಿವರಿಗೆ CJI ಎನ್‌ ವಿ ರಮಣ ಪತ್ರ

ಪ್ರಕರಣದ ಹಿನ್ನೆಲೆ
ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 80, 84, 86, 87 ಅಡಿ ಹಾಗೂ ಕರ್ನಾಟಕ ಅರಣ್ಯ ನಿಯಮ 144, 145 ಹಾಗೂ ಐಪಿಸಿ ಸೆಕ್ಷನ್ 379 ಅಡಿ 2020ರ ನವೆಂಬರ್ 19ರಂದು ಅರಣ್ಯಾಧಿಕಾರಿಗಳು ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಅರ್ಜಿದಾರನಿಗೆ ವಿಚಾರಣೆಗೆ ಹಾಜರಾಗುವಂತೆ 2021ರ ಜನವರಿ 13ರಂದು ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾದಲ್ಲಿ ಬಂಧನಕ್ಕೆ ಒಳಗಾಗುವ ಭೀತಿಗೆ ಒಳಗಾಗಿದ್ದ ಅರ್ಜಿದಾರ ವಿಚಾರಣೆಗೆ ತಪ್ಪಿಸಿಕೊಂಡು ಸೆಷನ್ಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಏಪ್ರಿಲ್ 29 ರಂದು ಸೆಷನ್ಸ್ ಕೋರ್ಟ್ ಅರ್ಜಿ ತಿರಸ್ಕರಿಸಿತ್ತು.

ABOUT THE AUTHOR

...view details