ಬೆಂಗಳೂರು: ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡೋದಾದರೆ ತೊಂದರೆ ಇಲ್ಲ. ಅವರು ಸ್ಪರ್ಧೆ ಮಾಡದಿದ್ದರೆ ಕ್ಷೇತ್ರ ನಮಗೆ ಬಿಟ್ಟುಕೊಡಿ ಎಂದು ಮನವಿ ಮಾಡಿರುವುದಾಗಿ ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾತನಾಡಿದ ಅವರು, ಈ ಸಂಬಂಧ ದೇವೇಗೌಡರನ್ನು ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಲ್ಲೂ ಮನವಿ ಮಾಡಿದ್ದೇವೆ. ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹಾಲಿ 10 ಸ್ಥಾನ ಬಿಟ್ಟುಕೊಡದಿರಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಅಲ್ಲಿಂದ ಬಂದ ಬಳಿಕ ದೇವೇಗೌಡರು ಹಾಗೂ ರಾಹುಲ್ ಗಾಂಧಿ ಸಭೆಯಲ್ಲಿ ಬದಲಾವಣೆಯಾಗಿದೆ ಎಂದು ವಿವರಿಸಿದರು.
ಎಲ್ಲ 10 ಸಂಸದರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅಂತಹದರಲ್ಲಿ ಮುದ್ದಹನುಮೇಗೌಡರೊಬ್ಬರ ಕ್ಷೇತ್ರವನ್ನು ಬಿಟ್ಟುಕೊಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಈ ಸಂಬಂಧ ದೇವೇಗೌಡರ ಜತೆ ನಿನ್ನೆ ಮಾತನಾಡಿದ್ದೇನೆ ಎಂದರು.
ಮೈಸೂರು ಬದಲಿಗೆ ತುಮಕೂರು ಹೋಯ್ತಾ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈಸೂರನ್ನು ತಂದು ನಾನು ತುಮಕೂರಿಗೆ ಕನೆಕ್ಟ್ ಮಾಡಲು ಹೋಗುವುದಿಲ್ಲ ಎಂದರು.
ಇಂಟರ್ ಲಿಂಕ್ ಎಲ್ಲಿರುತ್ತೋ ಗೊತ್ತಿಲ್ಲ. ಹೈಕಮಾಂಡ್ ಬಳಿ ಚರ್ಚೆ ವೇಳೆ ಹಾಲಿ ಸಂಸದರ ಕ್ಷೇತ್ರ ಬಿಟ್ಟುಕೊಡಬಾರದೆಂಬ ಮಾತಾಗಿತ್ತು. ಅಷ್ಟೇ ಅಲ್ಲ, ಮುದ್ದಹನುಮೇಗೌಡರು ಉತ್ತಮ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.