ಬೆಂಗಳೂರು:ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ತಂತ್ರಜ್ಞಾನದ ನೆರವಿನಿಂದ ವೈದ್ಯರು ಚಿಕಿತ್ಸೆ ನೀಡುವ ಐಸಿಯು ಟೆಲಿಕಾರ್ಟ್ ಎಂಬ ಅಪ್ಲಿಕೇಷನ್ ಅನ್ನು ಸಿಸ್ಕೋ ಕಂಪನಿ ಅಭಿವೃದ್ಧಿಪಡಿಸಿದೆ. ಇದಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದಾರೆ.
ಸದ್ಯ, ವಿಕ್ಟೋರಿಯಾ ಹಾಗೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಐಸಿಯು ಟೆಲಿಕಾರ್ಟ್ ಅಪ್ಲಿಕೇಷನ್ ಅಳವಡಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ನೂತನ ತಂತ್ರಜ್ಞಾನದಿಂದ ರೋಗಿಗಳಿಂದ ವೈದ್ಯರಿಗೆ ಸೋಂಕು ತಗುಲುವುದನ್ನ ಕಡಿಮೆ ಮಾಡಬಹುದು. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ವೈದ್ಯರಲ್ಲಿಯೂ ಕೊರೊನಾ ಪಾಸಿಟಿವ್ ಕಂಡುಬರುತ್ತಿದೆ. ಹಗಲಿರುಳು ಎನ್ನದೇ ಸೇವೆ ಸಲ್ಲಿಸುತ್ತಿರುವ ವೈದ್ಯ ಸಮೂಹಕ್ಕೆ ಆತ್ಮವಿಶ್ವಾಸ ತುಂಬುವುದು ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗಿದೆ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಈ ಟೆಕ್ನಾಲಜಿ ಬರಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.