ಕರ್ನಾಟಕ

karnataka

ETV Bharat / city

ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣ: ಚಾರ್ಜ್ ಶೀಟ್​​ನಲ್ಲಿ ಡಿಜಿ ಹೆಸರು ಕೈಬಿಟ್ಟಿದ್ದರೆ ಕಾನೂನು ಹೋರಾಟ.. ಡಿ.ರೂಪಾ - ಎಸಿಬಿ ಚಾರ್ಜ್​ಶೀಟ್​ನಲ್ಲಿ ಡಿಜಿ ಹೆಸರಿಲ್ಲ

ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ಕಲ್ಪಿಸಲು ಲಂಚ ಪಡೆದ ಆರೋಪದ ಸಂಬಂಧ ಎಸಿಬಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಡಿಜಿ ಸತ್ಯನಾರಾಯಣ್ ಅವರ ಹೆಸರಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಐಪಿಎಸ್ ಅಧಿಕಾರಿ ಡಿ.ರೂಪಾ ತಿಳಿಸಿದ್ದಾರೆ.

ಡಿ.ರೂಪಾ
ಡಿ.ರೂಪಾ

By

Published : Feb 4, 2022, 2:03 AM IST

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿರುವಾಗ ರಾಜಾತಿಥ್ಯ ಕಲ್ಪಿಸಲು ಲಂಚ ಪಡೆದ ಆರೋಪ ಸಂಬಂಧ ನ್ಯಾಯಾಲಯಕ್ಕೆ ಎಸಿಬಿ ಚಾರ್ಜ್ ಶೀಟ್ ಸಲ್ಲಿಸಿದ್ದು, ದೋಷಾರೋಪ ಪಟ್ಟಿಯಲ್ಲಿ ನಿವೃತ್ತ ಡಿಜಿ ಸತ್ಯನಾರಾಯಣ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕಾನೂನು ಹೋರಾಟ ನಡೆಸುವುದಾಗಿ ಐಪಿಎಸ್ ಆಧಿಕಾರಿ ಡಿ.ರೂಪಾ ಮೌದ್ಗಿಲ್ ತಿಳಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುವಾಗ ರಾಜಾತಿಥ್ಯ ಕಲ್ಪಿಸಲು ಆಗಿನ ಬಂಧಿಖಾನೆ ಇಲಾಖೆ ಡಿಜಿ ಸತ್ಯನಾರಾಯಣರಾವ್ 2 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗಿನ ಜೈಲು ಅಧೀಕ್ಷಕ ಹಾಗೂ ಉಪ ಅಧೀಕ್ಷಕರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ನಾಲ್ಕೂವರೆ ವರ್ಷಗಳ ಹಿಂದೆ ಸರ್ಕಾರಕ್ಕೆ ಡಿ.ರೂಪಾ ವರದಿ ಸಲ್ಲಿಸಿದ್ದರು.‌ ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಡಿ.ರೂಪಾ ನೀಡಿದ ವರದಿ ಆಧರಿಸಿ ಹಿರಿಯ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ ರೂಪಾ ನೀಡಿದ ವರದಿಯನ್ನು ಎತ್ತಿ ಹಿಡಿದಿತ್ತು‌‌‌.‌ ಇದೇ ಆಧಾರದ ಮೇಲೆ ಸರ್ಕಾರ ಎಸಿಬಿಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಇದೀಗ ತನಿಖೆ ಪೂರ್ಣಗೊಳಿಸಿ ಎಸಿಬಿ 7500 ಪುಟಗಳಷ್ಟು ಚಾರ್ಜ್ ಶೀಟ್​​ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದ್ರೆ ದೋಷಾರೋಪಣ ಪಟ್ಟಿಯಲ್ಲಿ ನಿವೃತ್ತ ಡಿಜಿ ಸತ್ಯನಾರಾಯಣ್ ರಾವ್ ಹೆಸರಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಐಜಿಪಿ‌ ರೂಪಾ ಪ್ರತಿಕ್ರಿಯಿಸಿದ್ದಾರೆ.

ಕಾನೂನು ಹೋರಾಟ ನಡೆಸುವೆ:
ಬಂಧಿಖಾನೆಯಲ್ಲಿ ಇಲಾಖೆಯ ಡಿಐಜಿಯಾಗಿ ಕಾರ್ಯನಿರ್ವಹಿಸುವಾಗ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ರಾಜಾತಿಥ್ಯ ಕಲ್ಪಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಆಗಿನ ಡಿಜಿ ಸತ್ಯನಾರಾಯಣರಾವ್ 2 ಕೋಟಿ ರೂಪಾಯಿ ಲಂಚ ಪಡೆದಿದ್ದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಸತ್ಯಶೋಧನೆಗಾಗಿ ಆಗಿನ ಸರ್ಕಾರ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ತಂಡ ರಚಿಸಿತ್ತು. ತನಿಖೆ ನಡೆಸಿದ ತಂಡ ಹಣಕಾಸಿನ ವ್ಯವಹಾರ ನಡೆಸಿರುವ ಬಗ್ಗೆ ಅಂತಿಮ ವರದಿ ನೀಡಿತ್ತು. ಇದೀಗ ಎಸಿಬಿ ತ‌ನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ವರದಿಯಲ್ಲಿ ರಾವ್ ಅವರ ಹೆಸರಿಲ್ಲ ಎಂಬುದರ ಬಗ್ಗೆ ಮಾಧ್ಯಮಗಳಿಂದ ಗಮನಿಸಿದ್ದು, ಈ ಬಗ್ಗೆ ಖಚಿತಪಡಿಸಿಕೊಂಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಪಡೆದುಕೊಳ್ಳುವೆ‌. ಒಂದು ವೇಳೆ ನಿವೃತ್ತ ಡಿಜಿ ಅವರ ಹೆಸರು ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ತನಿಖೆಯಲ್ಲಿ ರಾವ್ ಪಾತ್ರ ಕಂಡುಬಂದಿಲ್ಲ:
ರಾಜಾತಿಥ್ಯ ನೀಡಲು ಲಂಚ ಪಡೆದ ಸಂಬಂಧ ತನಿಖೆ ನಡೆಸಿ 7500 ಪುಟಗಳಷ್ಟು ಸಲ್ಲಿಸಿದ್ದ ಚಾರ್ಜ್ ಶೀಟ್​​ನಲ್ಲಿ ಸತ್ಯನಾರಾಯಣ್ ರಾವ್ ಅವರ ಹೆಸರು ಉಲ್ಲೇಖಿಸಿಲ್ಲ. ಅವರ ಮೇಲೆ ಬಂದಿರುವ ಆರೋಪಗಳಿಗೆ ಯಾವುದೇ ದಾಖಲಾತಿ ಸಿಕ್ಕಿಲ್ಲ‌. ಅಲ್ಲದೆ ಹಣಕಾಸಿನ ವ್ಯವಹಾರ ನಡೆಸಿರುವ ಬಗ್ಗೆ ಪೂರಕವಾದ ದಾಖಲೆ ಅಥವಾ ಸಾಕ್ಷ್ಯಾಧಾರಗಳು ಸಿಗದಿರುವ ಕಾರಣ ದೋಷಾರೋಪ ಪಟ್ಟಿಯಲ್ಲಿ ನಿವೃತ್ತ ಡಿಜಿ ಹೆಸರು ಕೈಬಿಡಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ‌.

ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಮೂಗನ್ನು ಮಾತ್ರ ಮುಚ್ಚುವ ವಿಶಿಷ್ಟ ಮಾಸ್ಕ್: ಈ ‘ಕೋಸ್ಕ್’ ಬಗ್ಗೆ ಎಲ್ಲೆಡೆ ಚರ್ಚೆ..

ABOUT THE AUTHOR

...view details