ಬೆಂಗಳೂರು:ಕಳೆದ ಚುನಾವಣೆಯಲ್ಲಿ ಸೋತು ನಾನು ಸಂಸತ್ಗೆ ಹೋಗುವ ಅವಕಾಶ ಕಳೆದುಕೊಂಡಿರಬಹುದು. ಹಾಗಂತ ನಾನು ಮನೆಯಲ್ಲಿ ಸುಮ್ಮನೆ ಕೂರಲ್ಲ. ನನ್ನ ನಂತರವೂ ಜೆಡಿಎಸ್ ಇರಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಿತು. ಜೆಡಿಎಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ದೇವೇಗೌಡರು, ಮೌರ್ಯ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ನಡೆಸಿದರು.
ಬಳಿಕ ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ದೇವೇಗೌಡ, ನಮ್ಮ ಬಗ್ಗೆ ಯಡಿಯೂರಪ್ಪ ಕಠೋರವಾಗಿ ಮಾತನಾಡುತ್ತಾರೆ. ಆದರೆ ಅವರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಅಪ್ಪ-ಮಕ್ಕಳನ್ನು ಮುಗಿಸುವುದೇ ನನ್ನ ಗುರಿ ಅಂತಾ ಬಿಎಸ್ವೈ ಹೇಳ್ತಾರೆ. ಯಾಕಪ್ಪಾ? ಎನ್ ತಪ್ಪು ಮಾಡಿದ್ದೀವಿ ನಾವು. ಜನರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿ ಬಂದವರು ನಾವು. ನಮ್ಮನ್ನು ಮುಗಿಸೋದು, ಬಿಡೋದು ಈ ರಾಜ್ಯದ ಜನರಿಂದ ಮಾತ್ರ ಸಾಧ್ಯ. ಯಡಿಯೂರಪ್ಪನವರೇ ಮೊದಲು ರಾಜ್ಯದ ಸಂಕಷ್ಟವನ್ನು ನಿವಾರಣೆ ಮಾಡಿ. ನಂತರ ರಾಜಕೀಯ ಮಾಡಿ ಎಂದು ಟಾಂಗ್ ನೀಡಿದರು.
ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಟೀಕೆ ಮಾಡಿದ್ರು. ಒಂದು ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷರಾಗಿದ್ದವರ ಬಗ್ಗೆ ನಾನು ಮಾತನಾಡೋದಿಲ್ಲ. ಆದರೆ ಆ ಮಾತು ನನಗೆ ಬಹಳಷ್ಟು ನೋವು ತಂದಿದೆ. ಅದು ಅವರು ಹೇಳಿದ್ದು ಅಲ್ಲ. ಅವರ ಕಡೆಯಿಂದ ಬೇರೆ ಯಾರೋ ಹೇಳಿಸಿದ್ರು ಎಂದು ಮಾಜಿ ಪ್ರಧಾನಿ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಎಷ್ಟು ನಷ್ಟ ಆಗಿದೆ ಅಂತ ಕೇಂದ್ರಕ್ಕೆ ಅಂದಾಜು ಪಟ್ಟಿ ಕಳಿಸಿದೆ. ಲೋಪದೋಷ ಇದೆ ಅಂತ ಹೇಳಿದ ಬಳಿಕ, ಸರಿಪಡಿಸಿ ಕಳಿಸಲಾಗಿತ್ತು. ಅದಾದ ಬಳಿಕ ಬಂದಿದ್ದು ಕೇವಲ 1200 ಕೋಟಿ ರೂ. ಅಷ್ಟೇ. ಎರಡೂ ಕಡೆ ಒಂದೇ ಸರ್ಕಾರವಿದ್ರೂ ಇವರ ನಡವಳಿಕೆ ಬೇಸರ ತರಿಸಿದೆ ಎಂದರು.
ನಾನು ಬೆಳಗಾವಿ ಜಿಲ್ಲೆಯಲ್ಲಿ ಆಗ್ತಿರೋ ಸಮಸ್ಯೆಯನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದು ಇವತ್ತಿನ ಸರ್ಕಾರಗಳಿಗೆ ತಿಳಿಯುತ್ತಿಲ್ಲವೇ? ಅಂದು ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಪ್ರಕೃತಿ ವಿಕೋಪಕ್ಕೆ ತಕ್ಷಣ ಹಣ ಬಿಡುಗಡೆ ಮಾಡಿದ್ದೇವೆ. ಇದನ್ನ ಇಲ್ಲಿಗೆ ಬಿಡೋದಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಲೇಬೇಕು. 1,200 ಕೋಟಿ ರೂ. ಹಣ ಎಲ್ಲಿ ಸಾಲುತ್ತದೆ. ತಕ್ಷಣ ಹೆಚ್ಚಿನ ಹಣ ಬಿಡುಗಡೆ ಮಾಡಲೇಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾನು ಸಿಎಂ ಆಗಿದ್ದಾಗ ಒಂದು ದಿನವೂ ನೆಮ್ಮದಿಯಾಗಿ ಮಲಗಿಲ್ಲ: ಹೆಚ್ಡಿಕೆ
ನಂತರ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿ ಒಂದು ದಿನ ನೆಮ್ಮದಿಯಾಗಿ ಮಲಗಿಲ್ಲ. ಆದರೆ ಇಂದು ಅಧಿಕಾರ ಬಿಟ್ಟ ಮೇಲೆ ನೆಮ್ಮದಿಯಾಗಿ ಇದ್ದೇನೆ. ಆದರೆ ಬೀದಿಗೆ ಬಿದ್ದರುವ ಜನರ ಗೋಳು ಕೇಳೋರಿಲ್ಲ. ಆ ಜನರ ಅಳಲು ನೋಡಿ ಇಂದು ನಾನು ಬೀದಿಗಿಳಿದಿದ್ದೇನೆ ಎಂದರು.
ಅತಿವೃಷ್ಟಿಯಿಂದ ಜನ ಮನೆ ಕಳೆದುಕೊಂಡಿದ್ದಾರೆ. ಕೃಷಿ ನಂಬಿ ಬದುಕುತ್ತಿದ್ದ ಜನ ಬೀದಿಗೆ ಬಂದಿದ್ದಾರೆ. ಬೆಳಗಾವಿಯಲ್ಲಿ ಕಬ್ಬು ಬೆಳೆ ನಂಬಿ ರೈತರು ಬದುಕುತ್ತಿದ್ದಾರೆ. ಕೋಯ್ನಾ ಡ್ಯಾಂನಿಂದ ನೀರು ಬಂದಿದ್ದರಿಂದ ಮತ್ತೆ ಬೆಳೆ ಬೆಳೆಯಲು ಕನಿಷ್ಠ ಎರಡು ವರ್ಷ ಬೇಕು. ಮೂರು ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿರೋದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಅಧಿಕಾರಿಗಳು ನೀಡೋ ಮಾಹಿತಿ ಪ್ರಕಾರ, ಪರಿಹಾರ ಕೆಲವು ಕುಟುಂಬಗಳಿಗೆ ಮಾತ್ರ ತಲುಪುತ್ತಿದೆ. ಸಂಪೂರ್ಣವಾಗಿ ಜಲಾವೃತವಾಗಿದ್ದ ಜಿಲ್ಲೆಗೆ ಮಾತ್ರ ಬಿಡುಗಡೆಯಾಗಿದೆ. ಮನೆ ಇಲ್ಲದೆ ಬೀದಿಯಲ್ಲಿ ಮಲಗಿರುವರಿಗೆ ನೆಲೆ ಕೊಡಿಸಲು ಸಾಧ್ಯವಾಗಿಲ್ಲ. ಬೆಳೆ ನಷ್ಟವಾಗಿರೋ ರೈತರ ಮಾಹಿತಿ ಪಡೆಯಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಇಂದು ನಾನು ಮುಖ್ಯಮಂತ್ರಿಯಾಗಿದ್ದಿದ್ದರೆ, ರಾಜ್ಯದ ಜನರ ತೆರಿಗೆಯ 30ರಿಂದ 40 ಸಾವಿರ ಕೋಟಿ ರೂ. ರಿಲೀಸ್ ಮಾಡಿ ಸಂತ್ರಸ್ತರಿಗೆ ಆಶ್ರಯ ನೀಡುತ್ತಿದ್ದೆ. ಯಡಿಯೂರಪ್ಪನವರಂತೆ ಕೇಂದ್ರ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿರಲಿಲ್ಲ. ರಾಜ್ಯದ ಬೊಕ್ಕಸದಲ್ಲಿ ಕೊಡುವಷ್ಟ ಹಣ ಇದೆ ಎಂದರು.