ಬೆಂಗಳೂರು: ನಾಳೆ ವರಿಷ್ಠರ ಭೇಟಿಗೆ ಸಮಯಾವಕಾಶ ಸಿಕ್ಕಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದೇನೆ. ಇದು ಸಂಪುಟ ವಿಸ್ತರಣೆ ಕುರಿತ ಚರ್ಚೆಗೆ ನಡೆಯುವ ಭೇಟಿಯಲ್ಲ, ಅದಕ್ಕಾಗಿ ಮುಂದಿನ ವಾರ ಮತ್ತೆ ತೆರಳಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆ ಒಂದು ವಾರ ವಿಳಂಬವಾಗಲಿದೆ ಎನ್ನುವ ಸುಳಿವು ನೀಡಿದ್ದಾರೆ.
ಕಾರವಾರ ಪ್ರವಾಸಕ್ಕೆ ತೆರಳುವ ಮುನ್ನ ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಲು ಸಮಯ ಕೇಳಿದ್ದೇನೆ, ಸಮಯ ಕೊಟ್ಟರೆ ನಾಳೆ ಬೆಳಗ್ಗೆ ಹೋಗುವ ಯೋಚನೆ ಇದೆ. ಈ ಭೇಟಿಯಲ್ಲಿ ಹೈಕಮಾಂಡ್ ಜೊತೆ ಸಂಪುಟದ ಬಗ್ಗೆ ಚರ್ಚೆ ಇಲ್ಲ. ಮುಂದಿನ ಭೇಟಿಯಲ್ಲಿ ಸಂಪುಟದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.
ಪ್ರಧಾನಮಂತ್ರಿ ಮೋದಿ ಜೊತೆ ನಿನ್ನೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಅವರು ನನಗೆ ಶುಭಕೋರಿದ್ದಾರೆ. ಒಳ್ಳೆಯ ಆಡಳಿತ ಕೊಡಿ, ಕೊಡುತ್ತೀರಾ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. ದೆಹಲಿ ಭೇಟಿ ವೇಳೆ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಅವರನ್ನೆಲ್ಲ ಭೇಟಿಯಾಗಿ ಮಾತನಾಡುತ್ತೇನೆ.
ನಾಳೆ ದೆಹಲಿಗೆ ಹೋದ್ರೂ ಸಂಪುಟ ಚರ್ಚೆ ಇಲ್ಲ: ಸಂಪುಟ ವಿಸ್ತರಣೆ ವಿಳಂಬದ ಸುಳಿವು ನೀಡಿದ ಬೊಮ್ಮಾಯಿ - ಕಾರವಾರಕ್ಕೆ ಬೊಮ್ಮಾಯಿ
ವರಿಷ್ಠರ ಭೇಟಿಗೆ ಸಮಯಾವಕಾಶ ಸಿಕ್ಕಲ್ಲಿ ನಾಳೆ ದೆಹಲಿಗೆ ತೆರಳಲು ನಿರ್ಧರಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ದೆಹಲಿಗೆ ಹೋದ ಸಂದರ್ಭದಲ್ಲಿ ಆ ಸಮಯವನ್ನು ಬಳಕೆ ಮಾಡಿ ನಮ್ಮ ಸಂಸದರು ಮತ್ತು ಕರ್ನಾಟಕದ ಸಚಿವರನ್ನು ಭೇಟಿಯಾಗಿ ಎಲ್ಲರನ್ನೂ ಕರೆದು ಚರ್ಚೆ ಮಾಡುತ್ತೇನೆ. ಕರ್ನಾಟಕಕ್ಕೆ ಸಂಬಂಧಪಟ್ಟ ಬಾಕಿ ಯೋಜನೆಗಳ ಕುರಿತು ಕೆಲಸ ಕಾರ್ಯಗಳ ಕುರಿತು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಈ ವರ್ಷ 18000 ಕೋಟಿ ಜಿಎಸ್ಟಿ ಕೊರತೆಯಿದೆ. ಕಳೆದ ಬಾರಿ 12 ಸಾವಿರ ಕೋಟಿ ಕೊಟ್ಟಿದ್ದರು. ಅದೇ ರೀತಿ, ಈ ಬಾರಿಯೂ ಅವರೇ ಸಾಲ ತೀರಿಸುವ ಯೋಜನೆ ಮುಖಾಂತರ 12 ಸಾವಿರ ಕೋಟಿ ಸಾಲ ಕೊಡಲು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಪಡೆಯುವ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ಇಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದೇನೆ. ಜಿಲ್ಲೆಯಲ್ಲಿ ಮೂರು ಜನ ಸಾವನ್ನಪಿದ್ದಾರೆ. ಜಿಲ್ಲೆಯಲ್ಲಿ ಪರಿಶೀಲನೆ ನಡೆಸುತ್ತೇನೆ. ನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಹೆಚ್ಚು ನೆರೆಹಾನಿ ಆಗಿದೆಯೋ ಆ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.