ಬೆಂಗಳೂರು: ನನಗೆ ಖಾತೆ ಬದಲಾವಣೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಹಿಂದೆ ಕೂಡ ಪ್ರವಾಸೋದ್ಯಮ ಖಾತೆ ನಿಭಾಯಿಸಿದ್ದೇನೆ. ಈಗ ಅರಣ್ಯ ಖಾತೆಯಲ್ಲೂ ಅನುಭವ ಬಂತು. ಸಿಎಂ ನನ್ನನ್ನು ಕೇಳಿಯೇ ಈ ತೀರ್ಮಾನ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನನಗೆ ಖಾತೆ ಬದಲಾವಣೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ: ಸಚಿವ ಆನಂದ್ ಸಿಂಗ್ ಸಚಿವ ಸುಧಾಕರ್, ಗೋಪಾಲಯ್ಯ ಬೇಸರ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಬದಲಾವಣೆಗಳಾದಾಗ ಕೆಲವರಿಗೆ ನೋವಾಗುವುದು ಸಹಜ. ಅದು ಅವರವರ ಭಾವನೆಗಳಿಗೆ ಬಿಟ್ಟಿದ್ದು. ನಾನು ಬೇರೆಯವರ ಅಸಮಾಧಾನಗಳ ಬಗ್ಗೆ ಮಾತನಾಡಲ್ಲ. ಅವರನ್ನೇ ಕೇಳಿದ್ರೆ ಉತ್ತರ ಕೊಡ್ತಾರೆ ಎಂದರು.
ಅರಣ್ಯ ಖಾತೆ ಬೇರ್ಪಡಿಸಿ, ಪರಿಸರ ಖಾತೆ ಉಳಿಸಿರುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲವನ್ನು ಕ್ಯಾಪ್ಟನ್ ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿಗಳು ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ತೆಗೆದುಕೊಂಡಿರುವ ತೀರ್ಮಾನವನ್ನು ಪ್ರಶ್ನೆ ಮಾಡುವುದಕ್ಕೆ ಆಗಲ್ಲ ಎಂದು ತಿಳಿಸಿದರು.