ಬೆಂಗಳೂರು :ಶಿವಮೊಗ್ಗ ಜಿಲ್ಲೆಯಿಂದ ನನಗೆ ಮಂತ್ರಿ ಸ್ಥಾನ ಕೊಡಬೇಕೆಂದು ಕೇಳಿದ್ದೇನೆ. ಆದರೆ, ನಾನು ಯಾವುದೇ ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಅಳೆದು ತೂಗಿ ಆಯ್ಕೆ ಮಾಡುತ್ತೆ. ನನಗಿಂತ ಅರಗ ಜ್ಞಾನೇಂದ್ರ, ಕೆ ಎಸ್ ಈಶ್ವರಪ್ಪ ಹಿರಿಯರಿದ್ದಾರೆ. ಜಿಲ್ಲೆಗೆ ಒಂದೇ ಸ್ಥಾನ ಕೊಟ್ಟರೆ ಕೆ ಎಸ್ ಈಶ್ವರಪ್ಪ ಅವರಿಗೆ ಕೊಡುತ್ತಾರೆ ಎಂದರು.
ಎರಡು ಸ್ಥಾನ ಕೊಟ್ಟರೆ ನನಗೂ ಮಂತ್ರಿ ಸ್ಥಾನ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಂದು ವೇಳೆ ಆರಗ ಜ್ಞಾನೇಂದ್ರ ಸ್ಪೀಕರ್ ಆದರೆ, ಆಗ ನನಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಲ್ಲ ಎಂದ ಹರತಾಳು ಹಾಲಪ್ಪ ಶಿವಮೊಗ್ಗ ರಾಜ್ಯ ರಾಜಕಾರಣದಲ್ಲಿ ಪ್ರಮುಖ. ಹೋರಾಟ, ಪ್ರಬುದ್ಧತೆಯಲ್ಲಿ ಜಿಲ್ಲೆ ಪ್ರಮುಖವಾಗಿದೆ. ಶಿವಮೊಗ್ಗ ಜಿಲ್ಲೆಗೆ 2 ಸ್ಥಾನ ನೀಡಿದರೆ ಅದರಲ್ಲಿ ನಾನು ಇರುತ್ತೇನೆ ಎಂದು ಹೇಳಿದರು.
ಸಂಪುಟದಲ್ಲಿ ವಿಜಯೇಂದ್ರಗೆ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ದೊಡ್ಡ ವಿಷಯ, ದೆಹಲಿಯ ಹೈಕಮಾಂಡ್ ಹಾಗೂ ರಾಜ್ಯದ ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದರು.