ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಣ್ಣಿಗೆ ಸೋಂಕು ಉಂಟಾಗಿದೆ. ಹಾಗಾಗಿ ದೆಹಲಿ ಪ್ರವಾಸ ರದ್ದುಗೊಳಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ನಾನು ವೈದ್ಯರ ಸಲಹೆಯಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡಿದ್ದೆ. ಆದ್ರೆ ಈಗ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದೇನೆ. ಜೊತೆಗೆ ಇದೇ ಕಾರಣಕ್ಕೆ ದೆಹಲಿ ಪ್ರವಾಸವನ್ನು ರದ್ದು ಮಾಡಬೇಕಾಯ್ತು. ವಿಶ್ರಾಂತಿ ಬಳಿಕ ಸೋಮವಾರದಿಂದ ಮತ್ತೆ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಮೂರು ದಿನ ನಡೆಸಿದ ಪ್ರವಾಸ ಸಂದರ್ಭ ಕಣ್ಣಿನ ಘಾಸಿಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಕಣ್ಣು ಮತ್ತೆ ಸೋಂಕಿಗೆ ತುತ್ತಾಗಿದೆ. ನಿರಂತರ ಓಡಾಟ, ಜನರ ಒಡನಾಟ, ಧೂಳು, ಹೊಗೆ ಮಧ್ಯೆ ಕಣ್ಣಿನ ಸೋಂಕು ಹೆಚ್ಚಾಗಿದೆ. ಇದರಿಂದ ಕಣ್ಣು ಸಮಸ್ಯೆ ಸುಧಾರಿಸುವವರೆಗೂ ಮನೆಯಲ್ಲೇ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಇನ್ನು ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದ ಉಮೇಶ್ ಕತ್ತಿ ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್ನ ಕೆಲ ನಾಯಕರನ್ನು ಭೇಟಿ ಮಾಡಿ, ಸಮಾಲೋಚಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಸಹ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಸಮಾಲೋಚಿಸುವ ಸಾಧ್ಯತೆ ಇತ್ತು. ಆದರೆ ಸಿದ್ದರಾಮಯ್ಯಗೆ ಕಣ್ಣಿನ ಸಮಸ್ಯೆ ಇರುವ ಹಿನ್ನೆಲೆ ಕೇವಲ ದೂರವಾಣಿ ಮೂಲಕ ಉಮೇಶ್ ಕತ್ತಿ ಜೊತೆ ಮಾತುಕತೆ ನಡೆಸಿ ಸುಮ್ಮನಾಗಿದ್ದಾರೆ ಎನ್ನಲಾಗಿದೆ.