ಕರ್ನಾಟಕ

karnataka

ETV Bharat / city

ಮಾನವ ಕಳ್ಳಸಾಗಣೆ ಯತ್ನ: ಆರೋಪಿಗೆ ಶಿಕ್ಷೆ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ - ಮಾನವ ಕಳ್ಳಸಾಗಣೆಗೆ ಯತ್ನ ಪ್ರಕರಣ: ಆರೋಪಿ ಶಿಕ್ಷೆ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್

ಮಾನವ ಕಳ್ಳಸಾಗಣೆಗಾಗಿ ನಕಲಿ ಪಾಸ್ಪೋರ್ಟ್ ಸಿದ್ದಪಡಿಸಿದ ಗಂಭೀರ ಆರೋಪದಡಿ ಆರೋಪಿ ಇಕ್ಬಾಲ್ ಅಹ್ಮದ್‌ಗೆ ಶಿಕ್ಷೆ ರದ್ದುಪಡಿಸಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದ್ದು, ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

human trafficking
ಮಾನವ ಕಳ್ಳಸಾಗಣೆಗೆ ಯತ್ನ ಪ್ರಕರಣ: ಆರೋಪಿ ಶಿಕ್ಷೆ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್

By

Published : Apr 8, 2022, 9:52 PM IST

ಬೆಂಗಳೂರು: ಮಾನವ ಕಳ್ಳಸಾಗಣೆಗಾಗಿ ನಕಲಿ ಪಾಸ್ಪೋರ್ಟ್ ಸಿದ್ದಪಡಿಸಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಇಕ್ಬಾಲ್ ಅಹ್ಮದ್ ಎಂಬಾತ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಮಾನವ ಕಳ್ಳಸಾಗಣೆ ನಡೆಸಲು ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಕುರಿತು 2009ರಲ್ಲಿ ಬೆಂಗಳೂರಿನ ಸಂಪಿಗೆ ನಗರ ಠಾಣಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಭೇದಿಸಲು ಅವರು ತಂಡ ರಚಿಸಿದ್ದ ಪೊಲೀಸ್ ಅಧಿಕಾರಿಗಳು ಕೆಲ ಶಂಕಿತ ಆರೋಪಿಗಳನ್ನು ಬಂಧಿಸಿದ್ದರು. ಜತೆಗೆ ಕೃತ್ಯಕ್ಕೆ ಸಂಬಂಧಿಸಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಬಂಧಿತ ಆರೋಪಿಯೋರ್ವ ಪ್ರಕರಣದಲ್ಲಿ ಇಕ್ಬಾಲ್ ಅಹ್ಮದ್ ಪಾತ್ರವಿದೆ ಎಂದು ಹೇಳಿಕೆ ನೀಡಿದ ಬಳಿಕ ಪ್ರಕರಣವು ಸಿಬಿಐಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸಿದ ಸಿಬಿಐ ಇಕ್ಬಾಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಇಕ್ಬಾಲ್‌ಗೆ ಶಿಕ್ಷೆ ವಿಧಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಇಕ್ಬಾಲ್ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ.

ಅರ್ಜಿ ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ಇದ್ದರೂ, ಸ್ಥಳಕ್ಕೆ ತೆರಳುವ ಮುನ್ನ ಎಫ್‌ಐಆರ್ ದಾಖಲಿಸಿಲ್ಲ. ಆದ್ದರಿಂದ, ಪ್ರಕರಣದ ತನಿಖೆ ಹಾಗೂ ನಂತರದ ಕಾನೂನು ಪ್ರಕ್ರಿಯೆಗಳು ದೋಷಪೂರಿತವಾಗಿವೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ವಾದ ತಿರಸ್ಕರಿಸಿರುವ ಪೀಠ ಸಂಭಾವ್ಯ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಪಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯು ಎಫ್‌ಐಆರ್ ದಾಖಲಿಸುವುದು ಕಡ್ಡಾಯವಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ:ಬಿಜೆಪಿಗೆ ಮತ ಹಾಕಿದ ಮುಸ್ಲಿಂ ಕುಟುಂಬಕ್ಕೆ ಥಳಿಸಿದ ಅದೇ ಸಮುದಾಯದ ಜನರು!

ABOUT THE AUTHOR

...view details