ಬೆಂಗಳೂರು: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ ಹಲವು ಉದ್ಯೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥವರಿಗೆ ನೆರವಾಗಲೆಂದು ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಸದಸ್ಯರಿಗೆ ಹಣ ಹಿಂಪಡೆಯಲು ಇದ್ದ ನಿಯಮಗಳನ್ನು ಸಡಿಲಿಸಿತ್ತು. ಉದ್ಯೋಗಿಗಳು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೂರು ತಿಂಗಳ ಮೊತ್ತದಷ್ಟು ಅಥವಾ ಭವಿಷ್ಯ ನಿಧಿಯ ತಮ್ಮ ಖಾತೆಯಲ್ಲಿ ಸಂಗ್ರಹವಾಗಿರುವ ಹಣದ ಶೇ.75ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ನೀಡಿತ್ತು. ಅದರಲ್ಲಿ ಎಷ್ಟು ಮಂದಿ ಹಣವನ್ನು ಹಿಂಪಡೆದರು ಮತ್ತು ರಾಜ್ಯದಲ್ಲಿ ಎಷ್ಟು ಮಂದಿಯ ಖಾತೆಗಳು ಸ್ಥಗಿತಗೊಂಡಿವೆ ಎಂಬುದನ್ನು ಈ ಮೂಲಕ ತಿಳಿಯೋಣ...
ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಬಹುಸಂಖ್ಯಾತ ನೌಕರರಿಗೆ ಭವಿಷ್ಯ ನಿಧಿಯೇ ಆಸರೆ. ಕೊರೊನಾಪ್ರೇರಿತ ಲಾಕ್ಡೌನ್ನಿಂದಾಗಿ ಜನರ ಕೈಯಲ್ಲಿ ಹಣ ಓಡಾಡಿದ್ದೇ ಕಡಿಮೆ. ಆಗ ತುರ್ತು ಹಣದ ಅವಶ್ಯಕತೆಗಾಗಿ ಎಷ್ಟೋ ಮಂದಿ ಪರದಾಡಿದ್ರು. ಆ ಸಂದರ್ಭದಲ್ಲಿ ಮೊದಲಿದ್ದ ನಿಯಮಗಳನ್ನು ಸಡಿಲಿಸಿ ಪಿಎಫ್ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿತು. ಸಂಕಷ್ಟದ ಸಂದರ್ಭದಿಂದ ಪಾರಾಗಲು ದೇಶದಲ್ಲಿ ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಭವಿಷ್ಯನಿಧಿ ಖಾತೆಯಿಂದ 4,684.52 ಕೋಟಿ ರೂಪಾಯಿ ಪಿಎಫ್ ಹಣ ಪಡೆದಿದ್ದಾರೆ. ಹಾಗೆಯೇ ಕೆಲವರ ಖಾತೆಗಳನ್ನು ಮುಚ್ಚಲಾಗಿದೆ.