ಬೆಂಗಳೂರು: ಆಗಸ್ಟ್ 1 ರಿಂದ 7ನೇ ತಾರೀಖಿನವರೆಗೆ ಸ್ತನ್ಯಪಾನ ಸಪ್ತಾಹ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸ್ತನ್ಯಪಾನದ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ವರ್ಲ್ಡ್ ಅಲಿಯನ್ಸ್ ಫಾರ್ ಬ್ರೆಸ್ಟ್ ಫೀಡೀಂಗ್ ಆ್ಯಕ್ಷನ್ 1992 ರಿಂದ ಈ ಸಪ್ತಾಹವನ್ನು ಆಚರಿಸುತ್ತಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಕೈಜೋಡಿಸಿವೆ.
ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ವಿಳಂಬವಾಗಿದ್ದ 'ತಾಯಂದಿರ ಎದೆ ಹಾಲಿನ ಬ್ಯಾಂಕ್' ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದ್ದು. ನೂರಾರು ನವಜಾತ ಶಿಶುಗಳಿಗೆ ವರದಾನವಾಗಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ 'ತಾಯಂದಿರ ಎದೆ ಹಾಲಿನ ಬ್ಯಾಂಕ್' ನಿರ್ಮಾಣ ಮಾಡಲಾಗಿದೆ ಪ್ರತಿ ದಿನ 20 ರಿಂದ 30 ತಾಯಂದಿರಿಗೆ ಎದೆ ಹಾಲನ್ನು ನೀಡಲಾಗುತ್ತಿದೆ.
ಶಿಶುಗಳ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಸೋಂಕು ತಡೆಗಟ್ಟಲು ತಾಯಿಯ ಎದೆ ಹಾಲು ಅತ್ಯಗತ್ಯ. ಇದು ಮಗುವಿನ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್ ನಿರ್ಮಿಸಲಾಗಿದೆ.
ವಾರದಲ್ಲಿ 4 ರಿಂದ 6 ಲೀಟರ್ ಹಾಲು ಸಂಗ್ರಹ:ವಾರದಲ್ಲಿ 4 ರಿಂದ 6 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ದಿನವೊಂದಕ್ಕೆ 500 ಎಂ.ಎಲ್ ಹಾಲು ಬೇಡಿಕೆಯನ್ನು ಪೂರೈಸಲಾಗುತ್ತಿದೆ. ದಿನದಿಂದ ದಿನಕ್ಕೆ ಹಾಲಿನ ಬೇಡಿಕೆ ಹೆಚ್ಚುತ್ತಿದೆ. ಸದ್ಯಕ್ಕೆ ರಾಜ್ಯದಲ್ಲಿರುವ ಏಕೈಕ ಎದೆ ಹಾಲಿನ ಕೇಂದ್ರ ಎನ್ನುವ ಹೆಗ್ಗಳಿಕೆಗೆ ವಾಣಿ ವಿಲಾಸ್ ಆಸ್ಪತ್ರೆ ಪಾತ್ರವಾಗಿದೆ. ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲೂ ಈ ರೀತಿಯ ಕೇಂದ್ರ ಆರಂಭಿಸಿದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಜೀವಾಮೃತವಾದ ಅಮೃತಧಾರೆ: ಇಲ್ಲಿ ಅಕಾಲಿಕವಾಗಿ ಜನಿಸಿದ ಶಿಶುಗಳು, ಸಾಕಷ್ಟು ದೇಹದ ತೂಕವಿಲ್ಲದೇ ಜನಿಸಿದ ಶಿಶುಗಳು, ಅನೇಕ ಕಾರಣದಿಂದ ಸಾಕಷ್ಟು ಎದೆ ಹಾಲು ಉತ್ಪಾದಿಸಲಾಗದ ತಾಯಂದಿರ ಶಿಶುಗಳು, ವಿವಿಧ ಕಾರಣಗಳಿಗಾಗಿ ತಾಯಂದಿರಿಂದ ದೂರ ಉಳಿದಿರುವ ಶಿಶುಗಳಿಗೆ ಅಮೃತಧಾರೆ ಜೀವಾಮೃತವಾಗಿ ಪರಿಣಮಿಸಿದೆ.
ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1,500ಕ್ಕೂ ಅಧಿಕ ಹೆರಿಗೆ: ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1,500ಕ್ಕೂ ಅಧಿಕ ಹೆರಿಗೆಗಳಾಗುತ್ತವೆ. ಪ್ರತಿ ತಿಂಗಳು ಜನಿಸುವ ಮಕ್ಕಳಲ್ಲಿ ಕನಿಷ್ಠ 150 ಶಿಶುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎದೆ ಹಾಲು ಅಗತ್ಯವಿರುತ್ತದೆ. ಈ ಹಿಂದೆ ತುರ್ತು ಅವಶ್ಯಕತೆಗಳಿಗೆ ನಗರದ ಖಾಸಗಿ ಮಿಲ್ಕ್ ಬ್ಯಾಂಕ್ ನಿಂದ ನವಜಾತ ಶಿಶುಗಳಿಗೆ ಅಗತ್ಯವಿರುವ ಎದೆ ಹಾಲು ತರಲಾಗುತ್ತಿತ್ತು.
ರಾಜ್ಯದಲ್ಲಿ ಮುಂದಿನ ದಿನದಲ್ಲಿ ಕಲಬುರಗಿ, ಬೆಳಗಾವಿ, ಮಂಗಳೂರು ವಿಭಾಗದಲ್ಲಿ ಅಮೃತಧಾರೆ ಪ್ರಾರಂಭವಾಗಲಿದೆ. ಜನಿಸುವ ಶೇ.68ರಷ್ಟು ನವಜಾತ ಶಿಶುಗಳಿಗೆ ಮಿಲ್ಕ್ ಬ್ಯಾಂಕ್ ಅವಶ್ಯಕವಿದ್ದು, ಹಾಲಿನ ಕೊರತೆಯಿಂದ ಶೇ.48ರಷ್ಟು ನವಜಾತ ಶಿಶುಗಳು ಮರಣ ಹೊಂದುತ್ತಿವೆ. ಇದರಿಂದ ಬಡ ಕುಟುಂಬಗಳಲ್ಲಿಗೆ ಸಾವಿರಾರೂ ರೂಪಾಯಿ ವ್ಯಯಿಸಿ ಎದೆ ಹಾಲು ನೀಡುವುದು ತಪ್ಪಿದಂತಾಗಿದೆ.