ಬೆಂಗಳೂರು: ಮನೆಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪಿತಳೊಬ್ಬಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದು, 4 ಲಕ್ಷ ರೂ. ಮೌಲ್ಯದ ಬೆಲೆಬಾಳುವ 105 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸುಮಾರು ನಾಲ್ಕೈದು ತಿಂಗಳಿಂದ ಮನೆಕೆಲಸ ಮಾಡಿಕೊಂಡಿದ್ದ ಮಹಿಳೆ, ಕೆಲಸ ಮಾಡುವ ಮನೆಯಲ್ಲಿನ ಚಿನ್ನದ ಒಡವೆಗಳನ್ನು ಹಂತ-ಹಂತವಾಗಿ ಕಳ್ಳತನ ಮಾಡಿದ್ದಾಳೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:ಚಿನ್ನ ಕಳ್ಳತನ ಮಾಡಿರುವ ಆರೋಪದಡಿ ವಿಚಾರಣೆ... ಮನನೊಂದು ಆತ್ಮಹತ್ಯೆಗೆ ಶರಣಾದ ಕೆಲಸದಾಕೆ
ಫೆಬ್ರವರಿ 4 ರಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಮನೆ ಮಾಲೀಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ ನಿರ್ದೇಶನದಂತೆ ಅನ್ನಪೂರ್ಣೇಶ್ವರಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಲೋಹಿತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.