ಬೆಂಗಳೂರು: ಆಸ್ಪತ್ರೆಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಕಾಲ್ ಸೆಂಟರ್ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಕೂಡ ಮಾಡಲಾಗುತ್ತದೆ. ಇದರಿಂದ ಆಸ್ಪತ್ರೆಗಳಲ್ಲಿ ಬಿಡುಗಡೆಯಾಗುತ್ತಿರುವ ರೋಗಿಗಳು ಮತ್ತು ದಾಖಲಾಗುತ್ತಿರುವ ರೋಗಿಗಳ ನಿಖರ ಮಾಹಿತಿ, ಬೆಡ್ಗಳ ಲಭ್ಯತೆ ಬಗ್ಗೆ ವಾಸ್ತವ ವರದಿಗಳು ದೊರಕಲು ಸಾಧ್ಯವಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಬೆಂಗಳೂರಿನ ಯಶವಂತಪುರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ನೆರವು ನೀಡಲು ಸ್ಥಾಪಿಸಿರುವ 1912 ಸಹಾಯವಾಣಿಯ ಹೆಚ್ಚುವರಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ 1912 ಸಹಾಯವಾಣಿಯಲ್ಲಿ 60 ಮಾರ್ಗಗಳಿದ್ದವು. ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು ( ಸೀಟರ್) ಸೇರಿಸಲಾಗಿದೆ. ಈವರೆಗೂ ಈ ಸಹಾಯವಾಣಿಗೆ ಕರೆ ಮಾಡಿದಾಗ 12ರಿಂದ 20 ನಿಮಿಷಗಳ ಕಾಯುವಿಕೆ ಇರುತ್ತಿತ್ತು. ಆದರೆ ಹೆಚ್ಚುವರಿ ಕರೆ ಮಾರ್ಗಗಳನ್ನು ಸ್ಥಾಪಿಸಿರುವುದರಿಂದ ಈಗ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದರು.