ಮಹದೇವಪುರ(ಬೆಂಗಳೂರು): ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಲು ಎಂಟು ವರ್ಷಗಳ ಹಿಂದೆ ಭೂಮಿ ಪೂಜೆ ಮಾಡಿದರೂ ಆರೋಗ್ಯ ಇಲಾಖೆ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದ ಕಟ್ಟಡ ಕಾಮಗಾರಿ ಆರಂಭವಾಗದೇ ನೆನೆಗುದಿಗೆ ಬಿದ್ದಿದೆ. ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇಲ್ಲದೇ ಖಾಸಗಿ ಆಸ್ಪತ್ರೆಗಳತ್ತ ಸಾರ್ವಜನಿಕರು ಮುಖ ಮಾಡುವಂತಾಗಿದೆ.
2013ರಲ್ಲಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬಿದರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ಮಾಡಿದರು. ಆದರೂ ಸಹ ಪ್ರಾಥಮಿಕ ಆರೋಗ್ಯ ಘಟಕ ಪ್ರಾರಂಭವಾಗದೆ ನೆನೆಗುದಿಗೆ ಬಿದ್ದಿದೆ.
ಆಸ್ಪತ್ರೆ ನಿರ್ಮಿಸಲು ಬಿದರಹಳ್ಳಿ ಸರ್ವೆ ನಂಬರ್ 193ರಲ್ಲಿ 2 ಎಕರೆ ಸರ್ಕಾರಿ ಜಾಗ ಕಾಯ್ದಿರಿಸಲಾಗಿತ್ತು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಾಜ ಕಲ್ಯಾಣ ಇಲಾಖೆ ಅರ್ಧ ಭಾಗವನ್ನು ಒತ್ತುವರಿ ಮಾಡಿ ಬಾಲಕರ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿದೆ.
ಶಿಥಿಲವಾದ ದಾದಿಯರ ಕೊಠಡಿ:
ಸುಸಜ್ಜಿತವಾದ ಆರೋಗ್ಯ ಕೇಂದ್ರಕ್ಕೆ ಕಟ್ಟಡವಿಲ್ಲದೆ ಶಿಥಿಲವಾದ ದಾದಿಯರ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಇಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯಲೂ ಯೋಗ್ಯವಾಗಿಲ್ಲ. ಮಳೆಗಾಲದ ವೇಳೆ ಕೊಠಡಿಯ ಮೇಲ್ಛಾವಣಿಯಲ್ಲಿ ನೀರು ಸುರಿಯುತ್ತಿದ್ದು. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಸಿಬ್ಬಂದಿ ಪ್ರಾಣಭಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೂಮಿ ಮಂಜೂರಾದ ಅಧಿಸೂಚನೆ ಇಲ್ಲಿ ನುರಿತ ವೈದ್ಯರು ದಾದಿಯರು ಮತ್ತು ಸಿಬ್ಬಂದಿ ಸೇರಿದಂತೆ ಲ್ಯಾಬ್ ವ್ಯವಸ್ಥೆ ಇದ್ದರೂ ಸುಸಜ್ಜಿತ ಕಟ್ಟಡವಿಲ್ಲದೆ ಸೊರಗಿದೆ. ದಾದಿಯರ ಕೊಠಡಿಯಲ್ಲಿ ಜಾಗ ಸಾಲದ್ದಕ್ಕೆ ಪಕ್ಕದಲ್ಲೇ ಇರುವ ಖಾಸಗಿ ಎನ್ಜಿಒ ಕೊಠಡಿಯನ್ನು ಅನುಮತಿ ಮೇರೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ದಿನ 50ಕ್ಕೂ ಹೆಚ್ಚು ರೋಗಿಗಳು ಬಂದರೂ ಸಾಕಷ್ಟು ಸ್ಥಳಾವಕಾಶ ಇಲ್ಲದೆ ಅವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ.
2013ರಲ್ಲಿ ಮಹದೇವಪುರ ಕ್ಷೇತ್ರದ ಆರು ಭಾಗದಲ್ಲಿ ಆರೋಗ್ಯ ಕೇಂದ್ರ ಪ್ರಾರಂಭಿಸಲು ಆರೋಗ್ಯ ಇಲಾಖೆಯಿಂದ ಅನುಮೋದನೆ ದೊರೆತಿದೆ. ಮಂಡೂರು, ಕೊಡತಿ, ಹಾಲನಾಯಕನಹಳ್ಳಿ, ಕಣ್ಣೂರು, ಮಾರತಹಳ್ಳಿಯಲ್ಲಿ ಈಗಾಗಲೇ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅದರೆ ಬಿದರಹಳ್ಳಿಯಲ್ಲಿ ಜಾಗ ಮಂಜೂರಾದರೂ ಆರೋಗ್ಯ ಇಲಾಖೆಯ ಇಂಜಿನಿಯರ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಂಟು ವರ್ಷದಿಂದ ಕಟ್ಟಡ ಪ್ರಾರಂಭವಾಗಿಲ್ಲ.
ಒಂದೇ ಜಾಗ ಎರಡು ಇಲಾಖೆಗಳಿಗೆ ಮಂಜೂರು:
2013ರಲ್ಲಿ ಬಿದರಹಳ್ಳಿಯ ಸರ್ವೇ ನಂಬರ್ 193ರಲ್ಲಿ 2 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಜಾಗದಲ್ಲಿ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ತಡ ಮಾಡಿದ ಪರಿಣಾಮ ಸರ್ಕಾರಿ ಭೂಮಿ ಖಾಲಿಯಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಯಾರ ಅನುಮತಿ ಪಡೆಯದೆ ಏಕಾಏಕಿ ಕಟ್ಟಡ ಕಾಮಗಾರಿ ಪ್ರಾರಂಭಿಸಿಬಿಟ್ಟಿದೆ. ಈ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳಿಗೆ ಕೊರೊನಾ ಲಸಿಕೆ ನೀಡಲು ಹೋದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಇದನ್ನು ಗಮನಿಸಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದಾಗ ಸಮಾಜ ಕಲ್ಯಾಣ ಇಲಾಖೆ ಅತಿಕ್ರಮಣ ಮಾಡಿ ಕಾಮಗಾರಿಯನ್ನು ಪ್ರಾರಂಭ ಮಾಡಿರುವುದು ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ ಒಂದೇ ಜಾಗವನ್ನು ಎರಡು ಇಲಾಖೆಗೆಳಿಗೆ ಮಂಜೂರು ಮಾಡಿದೆ. ಆರೋಗ್ಯ ಇಲಾಖೆ ಗೊತ್ತಾಗದೇ ಸಮಾಜ ಕಲ್ಯಾಣ ಇಲಾಖೆಗೆ ಬಾಲಕರ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ಮಂಜೂರು ಮಾಡಿದೆಯಾ? ಎಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಯಾರ ಅನುಮತಿ ಪಡೆದು ಕಾಮಗಾರಿ ಆರಂಭ ಮಾಡಿದ್ದು ಎಂದು ಕೇಳಿದಾಗ ಅವರಲ್ಲಿ ಯಾವುದೇ ಉತ್ತರವಿಲ್ಲ. ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರದ ಇತರ ಇಲಾಖೆಗಳು ಅತಿಕ್ರಮಣ ಮಾಡಿದರೂ ಕಂದಾಯ ಇಲಾಖೆಯ ಅಧಿಕಾರಿಗಳು ಜಾಣ ಕುರುಡುತನ ಅನುಸರಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 40 ಮಂದಿಗೆ ಕೋವಿಡ್