ಬೆಂಗಳೂರು: ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ 38 ಕೆರೆಗಳಿಗೆ ಕೆ.ಆರ್.ಪುರಂ ಎಸ್‌ಟಿಪಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು 2022ರ ಆಗಸ್ಟ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದರು.
ಸದನದಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರ ಪರವಾಗಿ ಉತ್ತರಿಸಿದ ಅವರು, ಕೆ.ಆರ್.ಪುರಂ ಎಸ್.ಟಿ.ಪಿ.ಯಿಂದ ಹೊಸಪೇಟೆ ತಾಲೂಕಿನ 38 ಕೆರೆಗಳಿಗೆ 149.85 ಕೋಟಿ ರೂ. ಮೊತ್ತದ ಪರಿಷ್ಕೃತ ಯೋಜನೆಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು 2021ರ ಫೆಬ್ರವರಿಯಲ್ಲಿ ಆರಂಭವಾಗಿವೆ ಎಂದು ಹೇಳಿದರು.
ಈ ಯೋಜನೆ ಜಾರಿಯಿಂದ ಹೊಸಕೋಟೆ ತಾಲೂಕಿನ 38 ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ. 2022ರ ಆಗಸ್ಟ್ ಒಳಗೆ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದರು. ಈ ಯೋಜನೆಯ ಕಾಮಗಾರಿ ಪ್ರಗತಿಯನ್ನು ಆಗಾಗ ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು ಪಾಲ್ಗೊಳ್ಳಬಹುದು. ಏನೇ ಆದರೂ ಆಗಸ್ಟ್ 2022ಕ್ಕೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೊರೊನಾ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲಿ ಕೆಲಸ ಮುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.