ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದಿಂದ ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ ಎಂಬ ವಿಚಾರ ವಿಧಾನಪರಿಷತ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.
ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾಗೂ ಸಾಕಷ್ಟು ಪ್ರಕರಣವನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿರುವ ಮಧುಕರ್ ಎಂಬ ಚಾನ್ಸಲರ್ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಣ್ಣಗೆ ಡಾಕ್ಟರೇಟ್ ನೀಡಿದ್ದಾರೆ ಎಂಬ ಮಾಧ್ಯಮ ದಾಖಲೆ ಇದೆ. ಈ ಸಮಾರಂಭದಲ್ಲಿ ಹಿಂದಿನ ರಾಜ್ಯಪಾಲ ವಜೂಭಾಯ್ ವಾಲಾ ಸಹ ಇದ್ದಾರೆ. ಇಂತಹ ಫ್ರಾಡ್‌ಗೆ ಡಾಕ್ಟರೇಟ್ ನೀಡಿದ್ದು ಹೇಗೆ? ನೀಡಿಲ್ಲಾ ಎಂದು ಈಗ ವಾದಿಸಲಾಗುತ್ತಿದೆ. ದಯವಿಟ್ಟು ಈ ಪ್ರಕರಣವನ್ನು ಎಸಿಬಿ ಇಲ್ಲವೇ ಸಿಐಡಿ ಮೂಲಕ ತನಿಖೆಗೆ ಒಳಪಡಿಸಬೇಕು. ಉನ್ನತ ಶಿಕ್ಷಣ ಸಚಿವರು ಸೂಕ್ತ ತನಿಖೆ ನಡೆಸಬೇಕು ಎಂದು ಹೆಚ್.ವಿಶ್ವನಾಥ್ ಒತ್ತಾಯಿಸಿದರು.
ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಯಾರಿಗೆ ಬೇಕಾದರೂ ಗೌರವ ಡಾಕ್ಟರೇಟ್ ನೀಡುವ ಅಧಿಕಾರ ಇದೆ. ಸರ್ಕಾರದ ಪರವಾನಗಿ ಕೇಳುವ ಅಗತ್ಯವಿಲ್ಲ. ಅವರ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು. ಅಲ್ಲದೇ ವಿಶ್ವನಾಥ್ ಅವರು ವೈಯಕ್ತಿಕ ಅಭಿಪ್ರಾಯ, ಬೇಸರ, ಅಸಮಾಧಾನವನ್ನು ಇಲ್ಲಿಗೆ ತರಬಾರದು. ಸದನದಲ್ಲಿ ಇಲ್ಲದವರ ಹೆಸರು ಪ್ರಸ್ತಾಪಿಸುವಂತಿಲ್ಲ ಎಂದು ಖಾರವಾಗಿ ನುಡಿದರು.
ವಿಶ್ವನಾಥ್, ಅಶ್ವತ್ಥ ನಾರಾಯಣ ನಡುವೆ ಬಿರುಸಿನ ಮಾತುಕತೆ
ವಿಶ್ವನಾಥ್ ಅವರು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಬಳಿ ಇದಕ್ಕೆ ಅಭಿಪ್ರಾಯ ಹೇಳಿ ಎಂದಾಗ, ನಮ್ಮಲ್ಲಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾತ್ರ ಇದ್ದಾರೆ. ಅಲ್ಲದೇ ನೀವು ಪ್ರಸ್ತಾಪಿಸಿದ ವ್ಯಕ್ತಿ ಆರೋಪಿತ ಮಾತ್ರ. ಇವರಿಂದ ವಂಚನೆ ಆಗಿದೆ ಎಂದು ವ್ಯಕ್ತಿ ಒಬ್ಬ ವಿಷ ಕುಡಿಯುವ ಪ್ರಯತ್ನ ಮಾಡಿದ್ದ. ಇದು ಪ್ರಕರಣ ದಾಖಲಾಗಿಲ್ಲ, ತನಿಖೆ ಆಗಿಲ್ಲ. ಇದರಿಂದ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದರು.