ಬೆಂಗಳೂರು: ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಮಹಿಳೆ ಮತ್ತು ಆಕೆಯ ಮಗಳನ್ನು ರಕ್ಷಿಸಿದ ಮುಖ್ಯ ಪೇದೆ ಮೀಸೆ ತಿಮ್ಮಯ್ಯ ಅವರ ಕಾರ್ಯ ವೈಖರಿಯನ್ನು ಸ್ಮರಿಸಿ ಇಂದು ಬೆಂಗಳೂರಿನಲ್ಲಿ ಅವರ ಪತ್ರಿಮೆ ಅನಾವರಣ ಮಾಡಲಾಯ್ತು.
ಪೊಲೀಸ್ ಇಲಾಖೆಯಲ್ಲಿ ಮೀಸೆ ತಿಮ್ಮಯ್ಯ ಎಂದೇ ಪ್ರಖ್ಯಾತಿ ಪಡೆದಿದ್ದ ಮುಖ್ಯ ಪೇದೆ ತಿಮ್ಮಯ್ಯ, 1994-95 ರ ಕಾಲದಲ್ಲಿ ಮಕ್ಕಳು, ವೃದ್ದರು, ವಾಹನ ಸವಾರರಿಗೆ ಅಚ್ಚುಮೆಚ್ಚು. ಉದ್ದ, ದಪ್ಪನೆಯ, ದೊಡ್ಡ ಹುರಿ ಮೀಸೆ ಹೊಂದಿದ್ದ ಹಿನ್ನೆಲೆಯಲ್ಲಿ ಮೀಸೆ ತಿಮ್ಮಯ್ಯ ಎಂದೇ ಪ್ರಸಿದ್ಧಿ ಹೊಂದಿದ್ದರು. ನಗರದ ಜನರಲ್ ಪೋಸ್ಟ್ ಆಫೀಸ್ ಕಚೇರಿ ಸಿಗ್ನಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೆಲಸದಲ್ಲಿ ತುಂಬಾ ನಿಷ್ಠೆ ಹೊಂದಿದ್ದ ತಿಮ್ಮಯ್ಯ, ತನ್ನ ವ್ಯಾಪ್ತಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಎಡೆಮಾಡಿಕೊಡುತ್ತಿದ್ದರು. 1995ರ ಅಗಸ್ಟ್ ತಿಂಗಳಲ್ಲಿ ಜಿಪಿಒ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ವೊಂದು ಮಹಿಳೆ ಹಾಗೂ ಆಕೆಯ ಮಗಳಿಗೆ ಡಿಕ್ಕಿ ಹೊಡೆಯವುದರಲ್ಲಿತ್ತು. ಅವರಿಬ್ಬರನ್ನು ರಕ್ಷಿಸಲು ಹೋದಾಗ ಮೀಸೆ ತಿಮ್ಮಯ್ಯ ಮೃತಪಟ್ಟಿದ್ದರು. ಅವರ ನೆನಪಿಗಾಗಿ ಜಿಪಿಒ ಬಳಿ ಇರುವ ವೃತ್ತಕ್ಕೆ ಪೊಲೀಸ್ ಮೀಸೆ ತಿಮ್ಮಯ್ಯ ವೃತ್ತ ಎಂದೇ ಹೆಸರಿಡಲಾಗಿದೆ.