ಬೆಂಗಳೂರು: ಪೊಲೀಸರು ಮತ್ತು ಶ್ರೀರಾಮಸೇನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಈದ್ಗಾ ಮೈದಾನದ ಸುತ್ತ ಶ್ರೀರಾಮ ಸೇನೆ ಕಾರ್ಯಕರ್ತರು ಘೋಷಣೆ ಕೂಗಿ ಈದ್ಗಾ ಮೈದಾನ ಪ್ರವೇಶಕ್ಕೆ ಯತ್ನಿಸಿದರು. ಆದ್ರೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಸ್ ಮೂಲಕ ಬೇರೆಡೆಗೆ ಕಾರ್ಯಕರ್ತರನ್ನು ಕರೆದೊಯ್ದರು. ಈ ವೇಳೆ ಕೆಲ ಕಾರ್ಯಕರ್ತರು ಪೊಲೀಸರಿಂದ ತಪ್ಪಿಸಿಕೊಂಡು ಹೋದರು. ಇದನ್ನು ಖಂಡಿಸಿದ ಕಾರ್ಯಕರ್ತರು ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿಭಟನಾಕಾರರು-ಪೊಲೀಸರ ಮಧ್ಯೆ ವಾಗ್ವಾದ ಈ ಘಟನೆ ಬಳಿಕ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಕೆಎಸ್ಆರ್ಪಿ ತುಕಡಿಗಳು ಮತ್ತು ಹೆಚ್ಚುವರಿ ಬಿಎಂಟಿಸಿ ಬಸ್ಗಳನ್ನು ಮೈದಾನಕ್ಕೆ ಕರೆಸಿದರು. ಈದ್ಗಾ ಮೈದಾನ ಸುತ್ತ ಉಂಟಾದ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೂ ಪೊಲೀಸರು ಮುಂದಾದರು. ಶ್ರೀರಾಮ ಸೇನೆ ಬಳಿಕ ಹಿಂದೂ ಪರ ಸಂಘಟನೆಗಳ ನಾಯಕರಿಂದ ಪ್ರತಿಭಟನೆ ಪ್ರಾರಂಭವಾಯಿತು. ಪ್ರತಿಭಟನೆಯಲ್ಲಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ, ವರ್ತಕರ ಸಂಘಗಳು ಮತ್ತು ಹಿಂದೂ ದೇವಸ್ಥಾನಗಳ ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿ ‘ರಕ್ತ ಕೊಟ್ಟೆವು ಮೈದಾನ ಬಿಡೆವು’ ಎಂದು ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ಮಧ್ಯ ಮತ್ತೆ ಮಾತಿನ ಚಕಮಕಿ ನಡೆಯಿತು. ಈಗ ಚಾಮರಾಜಪೇಟೆ ಬಂದ್ ತೀವ್ರ ಸ್ವರೂಪಕ್ಕೆ ತಿರುಗಿದೆ.
ಓದಿ:ಚಾಮರಾಜಪೇಟೆ ಬಂದ್: ಬಿಗಿ ಪೊಲೀಸ್ ಬಂದೋಬಸ್ತ್, ಖಾಸಗಿ ಶಾಲಾ-ಕಾಲೇಜಿಗೆ ರಜೆ
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ: ಇಂದು ಚಾಮರಾಜಪೇಟೆ ಬಂದ್ ಹಿನ್ನೆಲೆ ಎಲ್ಲ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದರು. ಈದ್ಗಾ ಮೈದಾನ ವಿವಾದ ವಿಚಾರ ಸಂಬಂಧ ಇಂದು ಚಾಮರಾಜಪೇಟೆ ಬಂದ್ ಕರೆ ಹಿನ್ನೆಲೆ ಪೊಲೀಸ್ ಭದ್ರತೆ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಚಾಮರಾಜಪೇಟೆ ಬಂದ್ ಹಿನ್ನೆಲೆ ಗೃಹ ಇಲಾಖೆ ವತಿಯಿಂದ ಪೊಲೀಸರು ಎಲ್ಲ ಬಂದೋಬಸ್ತ್ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಇದೆ ಆದರೆ ಯಾರೂ ಕಾನೂನು ಸುವ್ಯವಸ್ಥೆಯನ್ನು ಹಾಳಮಾಡಲು ಮುಂದಾಗಬಾರದು. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಎಲ್ಲರಲ್ಲಿಯೂ ವಿನಂತಿ ಮಾಡುವುದಾಗಿ ತಿಳಿಸಿದರು. ಬಂದ್ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶ ಇಲ್ಲ. ಅಲ್ಲಿ ಪೊಲೀಸರು ಇದ್ದಾರೆ. ಎಲ್ಲ ರೀತಿಯ ಬಂದೋಬಸ್ತ್ ಮಾಡಿದ್ದಾರೆ ಎಂದರು.
ಪಿಎಸ್‌ಐ ಪ್ರಕರಣದ ಲಾಭಕ್ಕೆ ಕಾಂಗ್ರೆಸ್ ಯತ್ನ: ಪಿಎಸ್‌ಐ ಪ್ರಕರಣದಲ್ಲಿ ಮತ್ತೊಬ್ಬ ಸಚಿವರ ಶಾಮೀಲು ಎಂಬ ಸಿದ್ದರಾಮಯ್ಯ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪಿಎಸ್‌ಐ ಅಕ್ರಮ ಪ್ರಕರಣವನ್ನು ಕಾಂಗ್ರೆಸ್ ಲಾಭ ಮಾಡಿಕೊಳ್ಳಲು ಹೊರಟಿದೆ. ಯಾರ್ಯಾರದ್ದೋ ಚಾರಿತ್ರ್ಯ ಹರಣ ಮಾಡುತ್ತಿದೆ. ಆ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಅವರ ಕಾಲದಲ್ಲಿ ಏನೇನಾಗಿದೆ ಅಂತ ಕಾಂಗ್ರೆಸ್ನವರು ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.