ಬೆಂಗಳೂರು: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಹಲಸೂರಿನಲ್ಲಿರುವ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ವಿವಿಧ ವಿಭಾಗಗಳ ಸಲಕರಣೆ ಪರಿವೀಕ್ಷಿಸಿ ಅದರ ಕಾರ್ಯಾಚರಣೆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
54 ಮೀಟರ್ ಎತ್ತರಕ್ಕೆ ಏರಿ ಪರಿಶೀಲನೆ:
ಅಗ್ನಿ ಅನಾಹುತ ಸೇರಿದಂತೆ ಇತರೆ ತುರ್ತು ಸಂದರ್ಭಗಳಲ್ಲಿ ಬಳಸಲಾಗುವ ಉಪಕರಣಗಳು, ಆತ್ಯಂತ ಕ್ಲಿಷ್ಟ ಪರಿಸ್ಥಿತಿ ನಡುವೆ ಅಗ್ನಿಶಾಮಕ ಸಿಬ್ಬಂದಿ ಉಪಯೋಗಿಸುವ ಸಾಧನಗಳ ಬಗ್ಗೆಯೂ ಮಾಹಿತಿ ನೀಡಿದರು. ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಏರಿಯಲ್ ಲ್ಯಾಂಡರ್ ಫ್ಲಾಟ್ ಫಾರಂ ವಾಹನ ಪರಿವೀಕ್ಷಿಸಿ 54 ಮೀಟರ್ ಎತ್ತರಕ್ಕೆ ಏರಿ ಪರಿಶೀಲಿಸಿದರು. ಜೊತೆಗೆ 1925ರ ಬ್ರಿಟನ್ ಮೂಲಕ ಆಮದು ಮಾಡಿಕೊಂಡಿದ್ದ ಡೆನ್ನಿಸ್ ವಾಹನ ಹತ್ತಿ ಹಲ್ಮೆಟ್ ಧರಿಸಿ ಸವಾರಿ ನಡೆಸುವ ಹಾಗೆ ಪೋಸ್ ನೀಡಿದರು. ಇದಕ್ಕೆ ಅಗ್ನಿಶಾಮಕ ಇಲಾಖೆಯ ಡಿಜಿ ಅಮರ್ ಕುಮಾರ್ ಪಾಂಡೆ ಸಾಥ್ ನೀಡಿದರು.
ಹಲಸೂರು ಕೆರೆಯಲ್ಲಿ ಬೋಟಿಂಗ್:
ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುವ ವಾಟರ್ ಬೌಜರ್, ರೆಸ್ಕ್ಯೂ ರಡಾರ್ ಡೆಮಾಲಿಷನ್ ಹ್ಯಾಮರ್, ಪಾಸ್ಲಾ ಕಟ್ಟರ್, ಕಾಂಬಿ ಟೂಲ್ ಸೇರಿದಂತೆ ಇನ್ನಿತರ ಉಪಕರಣಗಳ ಬಗ್ಗೆ ಅದರ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. ಹಲಸೂರು ಕೆರೆಯಲ್ಲಿ ಸಿಬ್ಬಂದಿಯೊಂದಿಗೆ ಬೋಟಿಂಗ್ ಮಾಡಿ ಹೊಸ ಅನುಭವ ಪಡೆದರು.
ಇದನ್ನೂ ಓದಿ:ಅಫ್ಘಾನಿಸ್ತಾನದಿಂದ ತವರೂರು ಶಿವಮೊಗ್ಗಕ್ಕೆ ಬರಲು ಹಾತೊರೆಯುತ್ತಿದ್ದಾರೆ ಪಾದ್ರಿ!
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಅಗ್ನಿಶಾಮಕ ದಳದ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಕರ್ನಾಟಕ ರಾಜ್ಯದ ಅಗ್ನಿಶಾಮಕ ದಳ ಅತ್ಯಂತ ಶಕ್ತಿಶಾಲಿಯಾಗಿದೆ. ಈ ರಾಜ್ಯದ ಜನರ ಪ್ರಾಣ ರಕ್ಷಣೆ ಮಾಡುತ್ತಿದೆ. ಪ್ರವಾಹ ಉಂಟಾದಾಗ ಸಿಬ್ಬಂದಿ ತಕ್ಷಣ ಕೆಲಸ ಮಾಡುತ್ತಾರೆ. ಕಾಡಿಗೆ ಬೆಂಕಿ ಬಿದ್ದಾಗ ರಕ್ಷಣೆ ಮಾಡಿದ್ದಾರೆ. ಇಲಾಖೆಗೆ ಇನ್ನೂ ಸಾಕಷ್ಟು ಉಪಕರಣಗಳು ಬೇಕಿದ್ದು, ಅದನ್ನು ಒದಗಿಸುವ ಕೆಲಸ ಮಾಡಲಿದ್ದೇವೆ. ಅದ್ಭುತವಾದ ಕೆಲಸವನ್ನು ಅಗ್ನಿಶಾಮಕ ದಳ ಮಾಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹ ರಕ್ಷಕ ದಳದ ಸಿಬ್ಬಂದಿ ವೇತನ:
ಗೃಹ ರಕ್ಷಕ ದಳದ ಸಿಬ್ಬಂದಿಗೆ ಕಡಿಮೆ ವೇತನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸಿಬ್ಬಂದಿ ಗೌರವಯುತವಾಗಿ ಜೀವನ ನಡೆಸಲು ಬೇಕಾಗುವ ವೇತನ ನೀಡುತ್ತೇವೆ. ಗೃಹ ರಕ್ಷಕದಳ ಸಿಬ್ಬಂದಿ ವೇತನವನ್ನು ಹೆಚ್ಚಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.