ಬೆಂಗಳೂರು :ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ಕೇಳಿ ಬಂದ ಆರೋಪಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡರ ಜೊತೆ ಸಭೆ ನಡೆಸಿದರು.
ಇನ್ನು, ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಟ್ರಾಫಿಕ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಯಾವುದೇ ವಾಹನವನ್ನು ಟೋಯಿಂಗ್ ಮಾಡುವ ಮೊದಲು ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು ಹಾಗೂ ವಾಹನ ಟೋಯಿಂಗ್ ಮಾಡಬೇಕಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ನಿಯಮಾವಳಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಎಂದು ಸೂಚಿಸಿದ್ದಾರೆ.