ಬೆಂಗಳೂರು:ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನಾರಚನೆಯಂತಹ ಚಟುವಟಿಕೆ ಬೇಡ, ಪಂಚ ರಾಜ್ಯಗಳ ಚುನಾವಣೆ ಮುಗಿಯುವರೆಗೂ ರಾಜ್ಯದಲ್ಲಿ ಯಾವುದೇ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಈ ಮೂಲಕ ಸಚಿವಾಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಸೆಯಾಗುವಂತೆ ಮಾಡಿದೆ.
ಎರಡು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುವಲ್ಲಿ ಸಫಲರಾಗಿದ್ದಾರೆ. ಕೇಂದ್ರದ ಹಲವು ಸಚಿವರ ಭೇಟಿ ನಂತರ ಅಮಿತ್ ಶಾ ಭೇಟಿಗೂ ಅನುಮತಿ ಸಿಕ್ಕಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿನ ರಾಜಕೀಯ ಸ್ಥಿತಿಗತಿ ಕುರಿತು ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಚುಟುಕಾಗಿ ಚರ್ಚೆ ನಡೆಸಿದರು. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಹೆಚ್ಚುತ್ತಿರುವ ಒತ್ತಡ, ಸಚಿವಾಕಾಂಕ್ಷಿಗಳ ಅಪೇಕ್ಷೆ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಗಳನ್ನು ಆಲಿಸಿದ ಅಮಿತ್ ಶಾ ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನಾರಚನೆಯಂತಹ ಕೆಲಸಕ್ಕೆ ಹೋಗಬೇಡಿ, ಪಂಚ ರಾಜ್ಯಗಳ ಚುನಾವಣೆ ಮುಗಿಯಲಿ, ರಾಜ್ಯದ ಬಜೆಟ್ ಕೂಡ ಮಂಡನೆಯಾಗಲಿದೆ. ಅಲ್ಲಿಯವರೆಗೂ ಯಾವುದೇ ಆಲೋಚನೆ ಮಾಡಲು ಹೋಗದಿರಿ, ಮಾರ್ಚ್ 15ರ ವರೆಗೂ ಯಾವುದೇ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿ:ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ
ಇದರ ಜೊತೆಗೆ ನಿಗಮ ಮಂಡಳಿ ಅಧ್ಯಕ್ಷ ಬದಲಾವಣೆ ವಿಚಾರದಲ್ಲಿಯೂ ಸದ್ಯಕ್ಕೆ ತಟಸ್ಥ ನಿಲುವು ತಳೆಯರಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ನ ಈ ನಿಲುವಿನಿಂದ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಸ್ಪಷ್ಟವಾಗಿದೆ. ಪ್ರತಿನಿತ್ಯ ಸಿಎಂ ನಿವಾಸಕ್ಕೆ ಅಲೆದಾಡುತ್ತಿರುವ ಆಕಾಂಕ್ಷಿಗಳು ಮತ್ತಷ್ಟು ದಿನ ಕಾಯಬೇಕಾಗಲಿದೆ. ಇದರ ಜೊತೆ ನಿಗಮ ಮಂಡಳಿ ಆಕಾಂಕ್ಷಿಗಳಿಗೂ ನಿರಾಸೆಯಾಗಿದೆ. ಪಟ್ಟಿ ಸಿದ್ದವಾಗಿದೆ ಇನ್ನೇನು ಹೈಕಮಾಂಡ್ ಅನುಮತಿ ಅಷ್ಟೆ ಬಾಕಿ ಎಂದು ಕಾದು ಕುಳಿತಿರುವ ಆಕಾಂಕ್ಷಿಗಳಿಗೆ ಈ ಬಾರಿಯೂ ಮತ್ತೆ ನಿರಾಸೆಯಾಗುವಂತಾಗಿದೆ.