ಬೆಂಗಳೂರು:ಹೋಂ ಐಸೋಲೇಷನ್ ಅವಧಿಯಲ್ಲಿ 3 ದಿನಗಳನ್ನು ಕಡಿತ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬೆಂಗಳೂರಿನ ಅಪಾರ ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರು ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೋಂ ಐಸೋಲೇಷನ್ ಅವಧಿಯನ್ನು 10 ದಿನಗಳಿಂದ 7 ದಿನಗಳಿಗೆ ಇಳಿಸಲಾಗಿದೆ ಎಂದರು.
ಅದೇ ರೀತಿ, ಸೋಂಕಿತರು ಗುಣಮುಖರಾದ ಬಳಿಕ ಮತ್ತೆ ಕೋವಿಡ್ ಪರೀಕ್ಷೆ ಮಾಡಿಸಿ, ನೆಗಟಿವ್ ವರದಿ ಪಡೆಯುವ ಅಗತ್ಯತೆ ಇಲ್ಲ. ಏಳು ದಿನಗಳ ಬಳಿಕ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಹೆಚ್ಚಿನ ಪ್ರಮಾಣದ ಔಷಧಿಯನ್ನು ಬಳಕೆ ಮಾಡದಂತೆ ಸೂಚನೆ:
ಹೆಚ್ಚಿನ ಪ್ರಮಾಣದ ಔಷಧ ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಬದಲಾಗಿ ಸಾಮಾನ್ಯ ಪ್ರಮಾಣದ ಮಾತ್ರೆಗಳನ್ನು ನೀಡಲಾಗುವುದು. ಆದರೆ, ಈ ಹಿಂದೆ ಎರಡನೇ ಅಲೆಯಲ್ಲಿ ಹೆಚ್ಚಿನ ಪ್ರಮಾಣದ ಮಾತ್ರೆ, ಔಷಧ ಬಳಕೆ ತೀವ್ರ ಪ್ರಮಾಣದಲ್ಲಿ ಇದ್ದ ಕಾರಣ ಬ್ಲಾಕ್ ಫಂಗಸ್ ಪ್ರಕರಣ ಬೆಳಕಿಗೆ ಬಂದಿತ್ತು ಎಂದರು.
ಹೋಂ ಐಸೋಲೇಷನ್ ರೋಗಿಗಳ ಮೇಲೆ ನಿಗಾ:
ಸ್ಟಾಪ್ ಒನ್ ಸಂಸ್ಥೆ ಸಹಯೋಗದೊಂದಿಗೆ ಬಿಬಿಎಂಪಿ ಹೋಂ ಐಸೋಲೇಷನ್ ರೋಗಿಗಳ ಮೇಲೆ ನಿಗಾ ಇರಿಸಿದೆ. ಸೋಂಕಿತರ ಸಹಾಯಕ್ಕೆ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.