ಬೆಂಗಳೂರು: ಕಳೆದ 10 ದಿನಗಳಿಂದ ನಡೆದಿದ್ದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಇಂದು ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದರು. 2014ಕ್ಕಿಂತಲೂ ಮೊದಲು ಹಾಕಿ ಸೇರಿದಂತೆ ಎಲ್ಲ ಕ್ರೀಡಾ ಪ್ರೇಮಿಗಳು ಕ್ರಿಕೆಟ್ ಹೊರತುಪಡಿಸಿ ಇತರ ಅಂತಾರಾಷ್ಟ್ರೀಯ ಪಂದ್ಯ ವೀಕ್ಷಣೆ ಮಾಡ್ತಿದ್ದ ವೇಳೆ ದೇಶದ ಬಗ್ಗೆ ಚಿಂತನೆ ಮಾಡ್ತಿದ್ದರು. ಒಲಿಂಪಿಕ್, ಏಷ್ಯನ್ ಗೇಮ್ಸ್ ಅಥವಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಹೆಸರೇ ಇರ್ತಿರಲಿಲ್ಲ ಎಂದು ಹೇಳಿದರು.
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರತ ನಂಬರ್ 1 ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದರು. ಅದೇ ಕಾರಣಕ್ಕಾಗಿ ಫಿಟ್ ಇಂಡಿಯಾ, ಖೇಲೋ ಇಂಡಿಯಾದಂತಹ ಅನೇಕ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಇದೀಗ ಅಂತಾರಾಷ್ಟ್ರೀಯ ಕ್ರೀಡೆ, ಒಲಿಂಪಿಕ್ಸ್ಗಳಲ್ಲಿ ಭಾರತದ ಫಲಿತಾಂಶ ಏನಾಗ್ತಿದೆ ಎಂಬುದನ್ನ ನೀವೂ ಕಾಣಬಹುದಾಗಿದೆ ಎಂದರು.
ಈ ವೇಳೆ ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್ ಯಶಸ್ವಿಯಾಗಿ ಮುಕ್ತಾಯಗೊಂಡಿವೆ. 208 ವಿಶ್ವವಿದ್ಯಾಲಯದ 3,800 ಅಥ್ಲೇಟ್ಸ್ಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದವು. ಈ ಮೂಲಕ ಎರಡು ರಾಷ್ಟ್ರೀಯ ದಾಖಲೆ ನಿರ್ಮಾಣವಾಗಿವೆ ಎಂದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಠಾಕೂರ್, ಸಂಸದ ತೇಜಸ್ವಿ ಸೂರ್ಯ, ಸಚಿವರಾದ ಆರಗ ಜ್ಞಾನೇಂದ್ರ, ನಾರಾಯಣಗೌಡ, ಅಶ್ವತ್ಥ ನಾರಾಯಣ, ನಟ ಸುದೀಪ್ ಭಾಗಿಯಾಗಿದ್ದರು.
ಹಾಕಿ ತಂಡಗಳಿಗೆ ಅಭಿನಂದನೆ :ಟೋಕಿಯೋ ಒಲಿಂಪಿಕ್ಸ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಕ್ಕೆ ಇದೇ ವೇಳೆ ಅಮಿತ್ ಶಾ ಅಭಿನಂದಿಸಿದರು. ರಾಣಿ ರಾಂಪಾಲ್ ನೇತೃತ್ವದ ಮಹಿಳಾ ತಂಡ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೆ, ಮನಪ್ರೀತ್ ಸಿಂಗ್ ನಾಯಕತ್ವದ ಪುರುಷರ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.