ಹುಬ್ಬಳ್ಳಿ: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಆದರೆ ಇದೀಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸುದೀಪ್ ಪರ ನಿಂತಿದ್ದಾರೆ. ಚಿತ್ರನಟ ಸುದೀಪ್ ಹೇಳಿರುವ ಮಾತು ಸರಿಯಿದೆ. ಮಾತೃಭಾಷೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗಲೇ ನಿರ್ಧಾರವಾಗಿದೆ. ಪ್ರಾದೇಶಿಕ ಭಾಷೆಗಳೇ ಸಾರ್ವಭೌಮ. ಅದೇ ವಿಚಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಗೌರವಿಸಬೇಕು. ಅದನ್ನೇ ಸುದೀಪ್ ಹೇಳಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನಟ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.
ಹಿಂದಿ ಭಾಷೆಯ ಕುರಿತು ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಮಧ್ಯೆ ವಿವಾದದ ಬಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಸಿಎಂ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸ್ಪಷ್ಟಪಡಿಸಿದರು. ಇನ್ನು ಸುದೀಪ್ ಹೇಳಿಕೆಗೆ ಈಗಾಗಲೇ ಹಲವು ನಟ-ನಟಿಯರು ಸೇರಿದಂತೆ ಹಲವರು ಬೆಂಬಲ ಸೂಚಿಸಿ ಟ್ವಿಟ್ ಮಾಡಿದ್ದಾರೆ.