ಬೆಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ದಾಖಲಿಸಿರುವ ರಿಟ್ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಮುಂದುವರಿಸಿದ್ದು, ನಾಳೆಯೂ ವಾದ - ಪ್ರತಿವಾದಗಳು ಮುಂದುವರಿಯಲಿವೆ.
ಹಿಜಾಬ್ ಕುರಿತಂತೆ ಸಲ್ಲಿಕೆಯಾಗಿರುವ 4 ರಿಟ್ ಅರ್ಜಿಗಳು ಹಾಗೂ ಎರಡು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸಸದಸ್ಯ ಪೀಠ ಇಂದು ಕೂಡಾ ವಿಚಾರಣೆ ಮುಂದುವರೆಸಿತು. ಸುಮಾರು 2 ಗಂಟೆಗೂ ಹೆಚ್ಚುಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ನನ್ನ ವಾದವನ್ನು ಮಾಧ್ಯಮಗಳು ವರದಿ ಮಾಡ್ತಿವೆ: ಕಾಮತ್ ಅಸಮಾಧಾನ:
ಕುರಾನ್ ಹಾಗೂ ಹಿಜಾಬ್ ಧರಿಸುವಿಕೆ ಕುರಿತಂತೆ ಇಸ್ಲಾಂ ಧರ್ಮದ ಮೂಲಗಳನ್ನು ವಿವರಿಸಲು ಆರಂಭಿಸಿದ ಕಾಮತ್ ನಾನು ವಾದಿಸುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡಬಾರದು. ಕೆಲವರು ಇದನ್ನೇ ವಿವಾದ ಮಾಡುತ್ತಿದ್ದಾರೆ. ಏಕೆಂದರೆ ನಾನೊಬ್ಬ ಹಿಂದೂ. ಆದರೆ, ನನ್ನ ಕೆಲಸವನ್ನಷ್ಟೇ ನಾನು ಮಾಡುತ್ತಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀವಿಲ್ಲಿ ಮೊದಲಿಗೆ ವಕೀಲರು ಎಂದಿತು.