ಬೆಂಗಳೂರು:ಹಿಜಾಬ್ ಧರಿಸಿ ತರಗತಿಗೆ ಬರದಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳು ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಇಂದು ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದವೇನು. ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಎತ್ತಿದ ಆಕ್ಷೇಪವೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ...
ಬೆಳಗ್ಗೆ 12.30ಕ್ಕೆ ಅರ್ಜಿಗಳ ವಿಚಾರಣೆ ಆರಂಭ:ಬೆಳಗ್ಗೆ ಅರ್ಜಿ ವಿಚಾರಣೆಗೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ಅಭಿಷೇಕ್ ವಾದಿಸಿ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಮತ್ತಷ್ಟು ಅರ್ಜಿಗಳು ಸಲ್ಲಿಕೆಯಾಗಲಿವೆ. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಸಂವಿಧಾನಬದ್ಧವಾಗಿಯೇ ಅರ್ಜಿಗಳ ವಿಚಾರಣೆ:ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಎಷ್ಟೇ ಅರ್ಜಿಗಳನ್ನು ಸಲ್ಲಿಸಿದರೂ ಎಲ್ಲದರ ಕೋರಿಕೆ ಒಂದೇ. ಹೀಗಾಗಿ ತೀರ್ಪು ಒಂದೇ ಆಗಿರುತ್ತದೆ ಎಂದರು. ಅಲ್ಲದೇ, ನಾವು ಪ್ರಕರಣವನ್ನು ಕಾನೂನಿನ ಮೂಲಕ ನೋಡುತ್ತೇವೆ, ಭಾವೋದ್ರೇಕತೆ ಅಥವಾ ಭಾವನೆಗಳ ದೃಷ್ಟಿಗಳಿಂದಲ್ಲ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ. ನ್ಯಾಯಾಲಯಕ್ಕೆ ಸಂವಿಧಾನವೇ ಭಗವದ್ಗೀತೆ ಇದ್ದಂತೆ ಎಂದರು.
ವಕೀಲ ತಾಹಿರ್ ವಾದ ಹೀಗಿತ್ತು:ಇದೇ ವೇಳೆ ಅರ್ಜಿದಾರರ ಪರ ಮತ್ತೋರ್ವ ವಕೀಲ ತಾಹಿರ್ ವಾದಿಸಿ, ಶೈಕ್ಷಣಿಕ ವರ್ಷ ಮುಗಿಯಲು ಕೇವಲ ಎರಡು ತಿಂಗಳುಗಳು ಮಾತ್ರ ಉಳಿದಿವೆ. ಕನಿಷ್ಠ ಎರಡು ತಿಂಗಳ ಕಾಲ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅನುಮತಿ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿದ್ಯಾರ್ಥಿಗಳು ರಸ್ತೆಗಿಳಿದ್ದಾರೆ. ಇಂತದ್ದೆಲ್ಲಾ ನೋಡಲಾಗುವುದಿಲ್ಲ. ಇದು ಖುಷಿಯ ವಿಚಾರವಲ್ಲ. ಅಂತಾರಾಷ್ಟ್ರೀಯ ಸಮುದಾಯವೂ ನೋಡುತ್ತಿದೆ. ನಾನು ಇನ್ನೊಂದು ವಿಷಯವನ್ನೂ ಹೇಳಬೇಕಾಗಿದೆ. ನನ್ನ ವಾಟ್ಸ್ಆ್ಯಪ್ ತೆರೆದಾಗ, ನೂರಾರು ಸಂದೇಶಗಳು ಅಪರಿಚಿತ ಸಂಖ್ಯೆಗಳಿಂದ ಇದೇ ವಿಚಾರದ ಕುರಿತು ಬರುತ್ತಿವೆ ಎಂದರು.
ಸರ್ಕಾರದ ಮೇಲಿನ ಆರೋಪ ಒಪ್ಪದ ಎಜಿ:ಇದೇ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿ, ರಾಜ್ಯ ಸರ್ಕಾರ ಸ್ವಲ್ಪ ಉದಾರತೆ ತೋರಿಸಿದರೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಗಿಯುವವರೆಗೆ ಸ್ಕಾರ್ಫ್ ಕಟ್ಟಿಕೊಳ್ಳುತ್ತಾರೆ ಎಂದರು. ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, ಸಂವಿಧಾನದ ವಿಧಿ 25 ರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಹಕ್ಕಿದೆಯೇ ಎಂಬ ಪ್ರಶ್ನೆಗಳನ್ನು ಈ ವಿವಾದ ಒಳಗೊಂಡಿದೆ.
ಈ ವಿಚಾರದಲ್ಲಿ ರಾಜ್ಯ ಉದಾರತೆ ತೋರಬೇಕು ಎಂಬ ಅಭಿಪ್ರಾಯವನ್ನು ನೀವು ಕೊಡಬಾರದು. ಈ ವಿಷಯದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಡ್ರೆಸ್ ಕೋಡ್ ಬಗ್ಗೆ ಕಾಲೇಜುಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಕಾಲೇಜು ಸಮಿತಿಗಳು ಸಮವಸ್ತ್ರವನ್ನು ನಿರ್ಧರಿಸುತ್ತವೆ. ಯಾವುದೇ ವಿದ್ಯಾರ್ಥಿಯು ಬದಲಾವಣೆ ಬಯಸಿದರೆ, ಆಯಾ ಸಮಿತಿಗಳನ್ನು ಸಂಪರ್ಕಿಸಬಹುದು ಎಂದರು.
ಹಿರಿಯ ವಕೀಲ ಕಾಮತ್ ವಾದದ ಝಲಕ್ ಇದು:2022ರ ಫೆಬ್ರವರಿ 5 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕಾನೂನು ಬಾಹಿರ. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಆಚರಣೆಯ ಭಾಗ. ಅದನ್ನು ನಿರ್ಬಂಧಿಸಲಾಗದು. ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿಯೂ ಹಿಜಾಬ್ ಧರಿಸಲು ಸಂವಿಧಾನದ ವಿಧಿ 19(1)(ಎ) ಸಮ್ಮತಿಸುತ್ತದೆ. ಹಿಜಾಬ್ ನಿರ್ಬಂಧಿಸಿರುವ ಕ್ರಮ ಸಂವಿಧಾನದ ವಿಧಿ 21ರಡಿ ಲಭ್ಯವಿರುವ ಖಾಸಗಿ ಹಕ್ಕಿನ ಉಲ್ಲಂಘನೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಡ್ರೆಸ್ ಕೋಡ್ ವಿಚಾರವನ್ನು ರಾಜ್ಯ ಸರ್ಕಾರ ನಿರ್ಧರಿಸಲು ಅವಕಾಶವಿಲ್ಲ.
ಕರ್ನಾಟಕ ಎಜುಕೇಷನ್ ಆ್ಯಕ್ಟ್ 1983 ರ ಸೆಕ್ಷನ್ 7 ಹಾಗೂ 133ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಸಂವಿಧಾನದ ವಿಧಿ 26ರಡಿ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಕಾನೂನು ಸುವ್ಯವಸ್ಥೆ, ಆರೋಗ್ಯ ಹಾಗೂ ನೈತಿಕತೆ ವಿಚಾರ ಹೊರತುಪಡಿಸಿ ಧಾರ್ಮಿಕ ಆಚರಣೆ ಹಕ್ಕನ್ನು ಸರ್ಕಾರ ನಿರ್ಬಂಧಿಸಲಾಗದು.
ಕುರಾನ್ ನಲ್ಲಿ ಮಹಿಳೆಯ ಅಂಗಾಂಗಳು ಕಾಣದಂತೆ ಉಡುಪು ಧರಿಸುವಂತೆ ಹೇಳಲಾಗಿದೆ. ಅಪರಿಚಿತರಿಗೆ ತನ್ನ ಮುಖ ಹಾಗೂ ಕೈಗಳ ಹೊರತು ದೇಹದ ಮತ್ತಾವ ಅಂಗವೂ ಕಾಣಿಸದಂತೆ ಮಹಿಳೆ ಉಡುಪು ಧರಿಸಬೇಕೆಂದು ತಿಳಿಸಲಾಗಿದೆ. ಕೇರಳ ಹೈಕೋರ್ಟ್ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಲ್ಲ ಎಂದಿದೆ. ಅದನ್ನು ಇಲ್ಲಿ ಅನ್ವಯಿಸಲಾಗದು ಎಂದರು.
ಹಿಜಾಬ್ ಪರ ನಾಲ್ಕು ತಾಸು ವಾದ:ಮಧ್ಯಾಹ್ನದ ನಂತರವೂ ಅರ್ಜಿದಾರರ ಪರ ಕಾಮತ್ ವಾದ ಮಂಡಿಸಿ, ಖಾಸಗಿ ಶಾಲೆಯಲ್ಲಿ ಹೆಡ್ ಸ್ಕಾರ್ಫ್‌ಗೆ ಅವಕಾಶ ನೀಡದ ಕೇರಳ ಹೈಕೋರ್ಟ್ 2018 ರಲ್ಲಿ ನೀಡಿದ್ದ ತೀರ್ಪು ಉಲ್ಲೇಖಿಸಿ, ಇದು ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಸ್ಕೂಲ್ ಆದ್ದರಿಂದ ಇಲ್ಲಿ ಪ್ರಕರಣವನ್ನು ಭಿನ್ನವಾಗಿ ಪರಿಗಣಿಸಲಾಗಿದೆ. ಸಂವಿಧಾನದ ವಿಧಿ 30 ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕೆಲ ಹಕ್ಕುಗಳನ್ನು ನೀಡಿವೆ. ಹೀಗಾಗಿ ಅಲ್ಲಿ ಪರಿಗಣಿಸಲಿಲ್ಲ. ಅದನ್ನೇ ಇಲ್ಲಿನ ಸರ್ಕಾರಿ ಶಾಲೆಗಳಿಗೂ ಅನ್ವಯಿಸಲಾಗದು.
ತಮ್ಮ ಬ್ರಾಹ್ಮಣತ್ವದ ಉದಾಹರಣೆ ಕೊಟ್ಟ ಕಾಮತ್:ನಾವು ಬ್ರಾಹ್ಮಣರು. ನಮ್ಮ ಮಕ್ಕಳು ನಾಮ ಧರಿಸಿ ಶಾಲೆಗೆ ಹೋಗುತ್ತಾರೆ. ಸಾರ್ವಜನಿಕ ಸುವ್ಯವಸ್ಥೆ ಹೆಸರಲ್ಲಿ ಅವರನ್ನು ನಿರ್ಬಂಧಿಸಹುದೇ. ತುರ್ಬಾನ್ ಧರಿಸಿದ ಸಿಖ್ಖರನ್ನು ಈ ಆಧಾರದಲ್ಲಿ ನಿರ್ಬಂಧಿಸಬಹುದೇ. ಇವೆಲ್ಲವೂ ಧಾರ್ಮಿಕ ಆಚರಣೆಯ ಭಾಗಗಳು. ಧಾರ್ಮಿಕ ಆಚರಣೆಯ ಭಾಗವಾಗಿ ಮಹಿಳೆಯರು ಹೊರಗೆ ಹಿಜಾಬ್ ಧರಿಸಿದಾಗ ಅದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಎಂದರೆ ಹೇಗೆ. ಕಾನೂನು ಸುವ್ಯವಸ್ಥೆಗೆ ಹಿಜಾಬ್ ಎಂದೂ ಅಡ್ಡಿಯಾಗಿಲ್ಲ. ಆದರೆ, ಸರ್ಕಾರ ಸಾರ್ವಜನಿಕ ಸುವ್ಯವಸ್ಥೆ ಹೆಸರಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದರು.
ಪೀಠದ ಪ್ರತಿಕ್ರಿಯೆ ಇದು:ಒಂದು ಹಂತದಲ್ಲಿ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಂದಿಮರಿಯನ್ನು ಹೊತ್ತುಕೊಂಡು ಮಾರ್ಕೆಟ್ ಗೆ ಹೋದರೆ ಸಮಸ್ಯೆಯಾಗುವುದಿಲ್ಲ. ಹೆಚ್ಚೆಂದರೆ ಹುಚ್ಚ ಎಂದು ನಗಬಹುದು. ಆದನ್ನೇ ಹೊತ್ತುಕೊಂಡು ಮಸೀದಿಗೋ, ದೇವಸ್ಥಾನಕ್ಕೋ, ಚರ್ಚಿಗೋ ಹೋದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದಿತು.
ಇದನ್ನು ಓದಿ:ಹಿಜಾಬ್ ವಿವಾದ: ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೈಕೋರ್ಟ್ ಸೂಚನೆ
ಶಿರವಸ್ತ್ರ ಧರಿಸಿ ಹೋದರೆ ಸಮಸ್ಯೆಯೇನೆಂದು ವಾದ:ವಾದ ಮುಂದುವರೆಸಿದ ಕಾಮತ್, ಮಕ್ಕಳು ಶಿರವಸ್ತ್ರ ಧರಿಸಿ ಶಾಲೆಗೆ ಹೋದರೆ ಯಾರಿಗೂ ಸಮಸ್ಯೆಯಲ್ಲ. ಶಾಲೆಗೆ ಸೇರಿದಾಗ ಸಮಸ್ಯೆಯಾಗಿಲ್ಲ. ಈಗಲೂ ಆಗುತ್ತಿಲ್ಲ. ಆದರೂ ತೊಂದರೆ ಮಾಡಲಾಗುತ್ತಿದೆ. ನಮ್ಮ ದೇಶ ಜಾತ್ಯಾತೀತ ರಾಷ್ಟ್ರ. ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯತೀತತೆ. ನಾಮ, ಕ್ರಾಸ್, ಹಿಜಾಬ್ ಗಳೆಲ್ಲವೂ ಧಾರ್ಮಿಕ ಆಚರಣೆಗಳು. ಆದರೆ, ಸರ್ಕಾರ ಧಾರ್ಮಿಕ ಆಚರಣೆಯಲ್ಲಿ ಅಸ್ಪೃಶ್ಯತೆ ಸೃಷ್ಟಿಸುತ್ತಿದೆ. ನಿನ್ನೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೂರಿಸಲಾಗಿದೆ ಎಂದು ಆರೋಪಿಸಿದರು.
ಆರೋಪಕ್ಕೆ ಎಜಿ ತೀವ್ರ ಆಕ್ಷೇಪ:ಧಾರ್ಮಿಕ ಅಸ್ಪೃಷ್ಯತೆ ಆರೋಪವನ್ನು ತೀವ್ರವಾಗಿ ಆಕ್ಷೇಪಿಸಿದ ಆಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಅನಗತ್ಯ ಆರೋಪಗಳನ್ನು ಮಾಡಬೇಡಿ. ಅಂತಹ ಘಟನೆಗಳು ನಡೆದಿಲ್ಲ ಎಂದರು. ಕಾಮತ್ ಪ್ರತಿಕ್ರಿಯಿಸಿ, ನಾನು ವಾದ ಮುಗಿಸಿದ ಬಳಿಕ ನೀವು ವಾದ ಮಂಡಿಸಿ ಎಂದರು. ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ನ್ಯಾಯಮೂರ್ತಿ ದೀಕ್ಷಿತ್, ಕಾಮತ್ ಕಡೆ ತಿರುಗಿ ದೆಹಲಿಯಲ್ಲಿ ಬೇಸಿಗೆ ಜೋರಾಗಿದೆಯೇ ಎಂದರು. ಬಳಿಕ ಎಜಿ ಉದ್ದೇಶಿಸಿ, ಅವರು ಹೇಳಿದ್ದನ್ನೂ ಕೇಳುತ್ತೇವೆ. ನೀವು ಹೇಳಿದ್ದನ್ನೂ ದಪ್ಪ ಅಕ್ಷರಗಳಲ್ಲಿ ದಾಖಲಿಸುತ್ತೇವೆ ಎಂದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪ:ವಾದ ಮಂಡನೆ ಪೂರ್ಣಗೊಳಿಸುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಆಕ್ಷೇಪ ಎತ್ತಿದ ಹಿರಿಯ ವಕೀಲ ಕಾಮತ್, ಹಿಜಾಬ್ ವಿಚಾರವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೆಲವೆಡೆ ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಅಟ್ಟಿಸಿಕೊಂಡು ಹೋಗಲಾಗುತ್ತಿದೆ. ಪ್ರತಿಭಟನೆ, ಬಂದ್ ಗಳಿಗೆ ನಿರ್ಬಂಧ ವಿಧಿಸಬೇಕು ಎಂದರು.
ಸುಳ್ಳು ಸುಳ್ಳು ಆರೋಪ ಮಾಡಬೇಡಿ;ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್, ಇಂತಹ ಸುಳ್ಳು ಆರೋಪಗಳು ಸರಿಯಲ್ಲ. ಎಲ್ಲಿಯೂ ಅಂತಹ ಘಟನೆಗಳು ನಡೆದಿಲ್ಲ. ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಕೊಡಬೇಕು. ಇಂತಹ ಪ್ರಚೋನದಕಾರಿ ಹೇಳಿಕೆಗಳಿಂದಲೇ ಕಾನೂನು ಸುವ್ಯವಸ್ಥೆ ಕೆಡುತ್ತದೆ. ಪ್ರಸ್ತುತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದರು.
ನಾಳೆಗೆ ಅರ್ಜಿ ವಿಚಾರಣೆ, ಶಾಂತಿ ಕಾಪಾಡಲು ಪೀಠದ ಮನವಿ:ಅರ್ಜಿದಾರರ ಪರ ವಕೀಲರ ವಾದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು. ಇದೇ ವೇಳೆ ನ್ಯಾ. ದೀಕ್ಷಿತ್ ರಾಜ್ಯದಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
ಇದನ್ನು ಓದಿ:Hijab Row: ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್