ಬೆಂಗಳೂರು:ರಾಜ್ಯದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದ ಚರ್ಚೆ ನಡೆದಿಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಇಲ್ಲಿ ಯಾವುದೇ ಚರ್ಚೆ ಆಗಿಲ್ಲ. ಹಾಗೇನಾದರೂ ಇದ್ದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಆಗಬೇಕು. ಮತ್ತೆ ಜೆಡಿಎಸ್ ಜೊತೆ ಹೋದ್ರೆ ನಮಗೆ ಅಭ್ಯಂತರವಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧವಾಗಿರ್ತೇವೆ. ನನಗೆ ವೈಯುಕ್ತಿಕವಾಗಿ ಯಾವುದೇ ಸಮಸ್ಯೆಯಿಲ್ಲ ಎಂದರು.
'ಕೈ' ಬಿಡಲ್ಲ:
ಯೋಗೇಶ್ವರ್ ಜೊತೆ ಚರ್ಚೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಗಾಳಿ ಸುದ್ದಿಗಳನ್ನ ಮಾಡೋದು ಬೇಡ. ಚಹಾ, ತಿಂಡಿ ತಿಂದರೆ ಅದಕ್ಕೆ ಬೇರೆ ಅರ್ಥ ಬೇಕಿಲ್ಲ. ಯೋಗೇಶ್ವರ್ ಜೊತೆ ಸ್ನೇಹ ಇರೋದು ನಿಜ. ನಾನು ಕಾಂಗ್ರೆಸ್ ಬಿಟ್ಟು ಹೋಗೋದಿಲ್ಲ. ಕಾಫಿ ತಿಂಡಿ ತಿಂದ ಮಾತ್ರಕ್ಕೆ ಹೋಗ್ತಾರೆ ಅನ್ನುವಂತಿಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರು ಬರಲಿ. ನಾವು ಅದಕ್ಕೆ ಸ್ವಾಗತ ಮಾಡ್ತೇವೆ ಎಂದರು.
ಸಂಸದರ ಬೆಂಬಲ ಕೇಳಿದ್ರೆ ತಪ್ಪೇನಿಲ್ಲ:
ಕೆ.ಆರ್.ಪೇಟೆಯಲ್ಲಿ ಸುಮಲತಾ ಬೆಂಬಲ ವಿಚಾರ ಮಾತನಾಡಿ, ಅವರು ನಮ್ಮ ಸಂಸದರು, ಬೆಂಬಲ ಕೇಳಿದ್ರೆ ತಪ್ಪೇನಿಲ್ಲ. ಅವರಿಗೆ ಬಿಜೆಪಿಯವರೂ ಬೆಂಬಲಿಸಿದ್ದರು. ಹೀಗಾಗಿ ಅವರು ಯಾವ ನಿರ್ಧಾರ ಮಾಡ್ತಾರೆ ನೊಡೋಣ. ಕ್ಷೇತ್ರ ಗೆಲ್ಲೋಕೆ ಸಂಸದರ ಬೆಂಬಲ ಕೋರಿದರೆ ತಪ್ಪೇನಿದೆ ಎಂದರು. ಕೆಪಿಸಿಸಿ ಕಚೇರಿಯಲ್ಲಿ ನಾವು ನಮ್ಮ ನಾಯಕರುಗಳು ಸುಮ್ಮನೆ ಸಭೆ ಸೇರಿದ್ದೆವು. ಹಾಗೆ ಸ್ವಲ್ಪ ಮಾತುಕತೆ ನಡೆಸಿದೆವು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.