ಕರ್ನಾಟಕ

karnataka

ETV Bharat / city

ಎಸ್​​ಸಿ - ಎಸ್​​ಟಿ ಜಮೀನು ಮಾರಾಟ ಕೇಸ್​.. ಹೈಕೋರ್ಟ್ ಮಹತ್ವದ ತೀರ್ಪು - ಎಸ್​ಸಿ ಎಸ್​ಟಿ ಜಮೀನು ಮಾರಾಟ ಮಾಡುವಂತಿಲ್ಲ

ಎಸ್ಸಿ-ಎಸ್ಟಿ (ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ರ ಸೆಕ್ಷನ್ 4(2)ರ ಪ್ರಕಾರ ಸರ್ಕಾರದಿಂದ ಮಂಜೂರಾದ ಜಮೀನನ್ನು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೇ ವರ್ಗಾವಣೆ, ಮಾರಾಟ ಹಾಗೂ ಸ್ವಾಧೀನ ಮಾಡಿಕೊಳ್ಳಲು ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

By

Published : Jun 12, 2021, 7:48 PM IST

ಬೆಂಗಳೂರು:ಕರ್ನಾಟಕ ಎಸ್ಸಿ-ಎಸ್ಟಿ (ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978 ಅಡಿ ಸರ್ಕಾರದಿಂದ ಮಂಜೂರಾದ ಜಮೀನಿನ ವರ್ಗಾವಣೆ, ಮಾರಾಟ ಹಾಗೂ ಸ್ವಾಧೀನಕ್ಕೆ ಮೂಲ ಮಂಜೂರುದಾರ ಅಥವಾ ಅವರ ಕಾನೂನಾತ್ಮಕ ವಾರಸುದಾರ ಸಲ್ಲಿಸುವ ಅರ್ಜಿಯನ್ನಷ್ಟೇ ಪರಿಗಣಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.


ಭೂ ಮಂಜೂರಾತಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಎಸ್ಸಿ - ಎಸ್ಟಿ (ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ರ ಸೆಕ್ಷನ್ 4(2)ರ ಪ್ರಕಾರ ಸರ್ಕಾರದಿಂದ ಮಂಜೂರಾದ ಜಮೀನನ್ನು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ವರ್ಗಾವಣೆ, ಮಾರಾಟ ಹಾಗೂ ಸ್ವಾಧೀನ ಮಾಡಿಕೊಳ್ಳಲು ಬರುವುದಿಲ್ಲ.

ಒಂದೊಮ್ಮೆ ವರ್ಗಾವಣೆ, ಮಾರಾಟ ಅಥವಾ ಸ್ವಾಧೀನಕ್ಕೆ ಅನುಮತಿ ಕೋರಿ ಸೆಕ್ಷನ್ 4(2)ರ ಅಡಿ ಅರ್ಜಿ ಸಲ್ಲಿಕೆಯಾದರೆ ಅದನ್ನು ಮೂಲ ಅರ್ಜಿದಾರರು ಅಥವಾ ಅವರ ಕಾನೂನಾತ್ಮಕ ವಾರಸುದಾರರು ಸಲ್ಲಿಸಿದ್ದಾರೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು.

ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಮೂಲ ವಾರಸುದಾರ ಅಥವಾ ಕಾನೂನಾತ್ಮಕ ವಾರಸುದಾರರನ್ನು ಖುದ್ದಾಗಿ ಕರೆದು ಅವರ ಕ್ಲೇಮಿನ ವಾಸ್ತವತೆಯನ್ನು ಪರೀಕ್ಷಿಸಬೇಕು. ಮೂಲ ಮಂಜೂರುದಾರ ಅಥವಾ ಕಾನೂನಾತ್ಮಕ ವಾರಸು ಎಂಬುದು ಖಚಿತವಾದರಷ್ಟೇ ಅನುಮತಿ ನೀಡಬೇಕು ಎಂದು ಆದೇಶಿಸಿದೆ.


ಪ್ರಕರಣದ ಹಿನ್ನೆಲೆ :
ರಾಜ್ಯ ಸರ್ಕಾರ 1939ರಲ್ಲಿ ಬೆಂಗಳೂರಿನ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿಯಲ್ಲಿ ರೈತ ಪೂಜಿಗ ಎಂಬುವರಿಗೆ 2.4 ಎಕರೆ ಭೂಮಿಯನ್ನು 20 ವರ್ಷ ಪರಭಾರೆ ಮಾಡದ ಷರತ್ತಿನೊಂದಿಗೆ ಮಂಜೂರು ಮಾಡಿತ್ತು. ಆದರೆ ಪೂಜಿಗ ಎಂಬುವವರು 1951ರಲ್ಲಿ ಮಾರಾಟ ಮಾಡಿದ್ದರು. ನಂತರ ಈ ಜಮೀನು ಮೂವರಿಗೆ ವರ್ಗಾವಣೆಯಾಗಿ 1980ರಲ್ಲಿ ರವಿಕಿರಣ್ ಹಾಗೂ ಕುಮಾರ್ ಎಂಬುವರು ಖರೀದಿಸಿದ್ದರು. ಆ ಬಳಿಕ ಪೂಜಿಗ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ ಮತ್ತೆ ಜಾಮೀನನ್ನು ಸ್ವಾಧೀನಕ್ಕೆ ಕೋರಿದ್ದರು.


ಅರ್ಜಿ ಪುರಸ್ಕರಿಸಿದ್ದ ಎಸಿ, ಎಲ್ಲ ಮಾರಾಟ ಪ್ರಕ್ರಿಯೆಗಳನ್ನು ಕಾನೂನು ಬಾಹಿರ ಎಂದು ಘೋಷಿಸಿ 1985 ರಲ್ಲಿ ಮತ್ತೆ ಭೂಮಿಯ ಹಕ್ಕನ್ನು ಪೂಜಿಗ ಹೆಸರಿಗೆ ಪುನರ್ ನೀಡಿದ್ದರು. ಆದೇಶ ಪ್ರಶ್ನಿಸಿ ರವಿಕಿರಣ್ ಹಾಗೂ ಕುಮಾರ್ ಕಾನೂನು ಹೋರಾಟ ನಡೆಸಿ ಸೋತಿದ್ದರು.

ಈ ನಡುವೆ ಪೂಜಿಗ ತಮ್ಮ ದತ್ತುಪುತ್ರ ವೆಂಕಟೇಶ್​ಗೆ ಜಮೀನು ವಿಲ್ ಬರೆದು 1988ರಲ್ಲಿ ಸಾವನ್ನಪಿದ್ದರು. ಆ ಬಳಿಕ ದತ್ತುಪುತ್ರ ವೆಂಕಟೇಶ್ ಜಮೀನನ್ನು ಶ್ರೀನಿವಾಸ್ ಎಂಬುವರಿಗೆ ಜಿಪಿಎ ಮಾಡಿಕೊಟ್ಟಿದ್ದರು.

ಶ್ರೀನಿವಾಸ್ 2008ರಲ್ಲಿ ವಿಜಯ್ ಕುಮಾರ್ ಎಂಬುವರಿಗೆ ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿ ವೆಂಕಟೇಶ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಸಿವಿಲ್ ಕೋರ್ಟ್ ವೆಂಕಟೇಶ್ ಪೂಜಿಗನನ್ನು ಕಾನೂನಾತ್ಮಕ ವಾರಸುದಾರ ಅಲ್ಲವೆಂದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ABOUT THE AUTHOR

...view details