ಬೆಂಗಳೂರು:ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಯಂತ್ರೋಪಕರಣಗಳನ್ನು ಅಳವಡಿಸುವಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಏಪ್ರಿಲ್ 1ರಿಂದ ಆಸ್ಪತ್ರೆ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.
ಡಿಮ್ಹಾನ್ಸ್‌ಗೆ ಅಗತ್ಯ ಸೌಲಭ್ಯ ಒದಗಿಸುವ ಕುರಿತಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ವಿಳಂಬ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠ, ಡಿಮಾನ್ಸ್ ಉನ್ನತೀಕರಿಸಲು ಸರ್ಕಾರಕ್ಕೆ ಈಗಾಗಲೇ 3 ತಿಂಗಳ ಸಮಯ ನೀಡಲಾಗಿದೆ. ಆದರೂ, ಸರ್ಕಾರ ಏನೇನೂ ಕೆಲಸ ಮಾಡಿಲ್ಲ. ಸರ್ಕಾರ ಕೆಲಸ ಮಾಡುವಂತೆ ಮಾಡಲು ಏನು ಮಾಡಬೇಕು? ನಿಮಗೆ ಆಸ್ಪತ್ರೆ ಬೇಡವಾದರೆ ಮುಚ್ಚಿಬಿಡಿ ಎಂದು ಕಟುವಾಗಿ ಟೀಕಿಸಿತು.
ಅಲ್ಲದೇ, ಈ ವಿಚಾರವಾಗಿ ಸರ್ಕಾರ ಕೆಲಸ ಮಾಡಿರುವುದಕ್ಕೆ ಒಂದೇ ಒಂದು ದಾಖಲೆಯನ್ನೂ ಕೋರ್ಟ್ಗೆ ಸಲ್ಲಿಸಿಲ್ಲ. ಪ್ರಧಾನ ಕಾರ್ಯದರ್ಶಿಯನ್ನು ಪುನಃ ನ್ಯಾಯಾಲಯಕ್ಕೆ ಕರೆಯಬೇಕೆ? ಎಂದು ಪ್ರಶ್ನಿಸಿತು.
ಸರ್ಕಾರದ ಪರ ವಕೀಲರು ಉತ್ತರಿಸಿ, ಆಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರ ಪೂರೈಸುವುದಕ್ಕೆ ಟೆಂಡರ್ ಕರೆಯಲಾಗಿದ್ದು, ಕಾರ್ಯಾದೇಶ ನೀಡಲಾಗಿದೆ. ಅಮೆರಿಕಾದಿಂದ ಇನ್ನಷ್ಟೇ ಯಂತ್ರಗಳು ಪೂರೈಕೆಯಾಗಬೇಕಿದೆ. ಎಂಐಆರ್ ಯಂತ್ರ ಅಳವಡಿಸುವುದು ಸೇರಿದಂತೆ ಡಿಮ್ಹಾನ್ಸ್‌ಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ತನ್ನ ಮಾತಿನಂತೆ ಮಾರ್ಚ್ 30ರೊಳಗೆ ಕೆಲಸ ಪೂರ್ಣಗೊಳಿಸಬೇಕು. ಉನ್ನತೀಕರಿಸಿದ ಮನೋವೈದ್ಯಕೀಯ ಆಸ್ಪತ್ರೆಯು ಏಪ್ರಿಲ್ 1ರಿಂದ ಕೆಲಸ ಆರಂಭಿಸಬೇಕು. ಆದೇಶದ ಅನುಪಾಲನೆ ಕುರಿತಂತೆ ಪ್ರಮಾಣಪತ್ರ ಸಲ್ಲಿಸಬೇಕು. ತಪ್ಪಿದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿತು.
ಇದನ್ನೂ ಓದಿ:ಅಪಘಾತದಲ್ಲಿ ಗಾಯಾಳು ಮಹಿಳೆಯ ರಕ್ಷಣೆಗೆ ತಮ್ಮ ಕಾರನ್ನೇ ನೀಡಿದ ಚಿಕ್ಕಬಳ್ಳಾಪುರ ಎಸ್ಪಿ