ಕರ್ನಾಟಕ

karnataka

ETV Bharat / city

ಪಿಎಸ್​​ಐ ನೇಮಕಾತಿ ಅಕ್ರಮ ಕೇಸ್​: ​ಮರು ಪರೀಕ್ಷೆಗೆ ಹೈಕೋರ್ಟ್​ನಿಂದ ತಡೆ - ಮರುಪರೀಕ್ಷೆ ನಡೆಸುವುದಾಗಿ ಆದೇಶ

ರಾಜ್ಯದಲ್ಲಿ ಭಾರಿ ಸದ್ದು ಮಾಡಿರುವ ಪಿಎಸ್​​ಐ ನೇಮಕಾತಿ ಅಕ್ರಮ ಕೇಸ್​ ಹೈಕೋರ್ಟ್​ ಅಂಗಳದಲ್ಲಿದ್ದು, ಮರು ಪರೀಕ್ಷೆ ನಡೆಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರಕ್ಕೆ ಕಡಿವಾಣ ಹಾಕಿ, ಮುಂದಿನ ಆದೇಶದವರೆಗೆ ಪರೀಕ್ಷೆ ನಡೆಸದಂತೆ ಸೂಚಿಸಿದೆ.

high-court-stay-on-re-examination-of-psi
ಮರು ಪರೀಕ್ಷೆಗೆ ಹೈಕೋರ್ಟ್​ನಿಂದ ತಡೆ

By

Published : Sep 28, 2022, 10:28 PM IST

ಬೆಂಗಳೂರು:ಪಿಎಸ್​ಐ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ಸರ್ಕಾರ ಪರೀಕ್ಷೆಯನ್ನೇ ರದ್ದು ಮಾಡಿತ್ತು. ಬಳಿಕ 454 ಪಿಎಸ್​ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಘೋಷಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್​ ತಡೆ ನೀಡಿದೆ.

ಮರುಪರೀಕ್ಷೆ ರದ್ದು ಕೋರಿ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ. ಜಿ.ನರೇಂದರ್ ಅವರಿದ್ದ ವಿಭಾಗೀಯ ಪೀಠ ಪರೀಕ್ಷೆಗೆ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶದವರೆಗೆ ಮರು ಪರೀಕ್ಷೆ ದಿನಾಂಕ ಪ್ರಕಟಿಸದಂತೆ ನಿರ್ಬಂಧಿಸಿದೆ.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪಿಎಸ್​ಐ ನೇಮಕಾತಿ ಹಗರಣದ ತನಿಖೆ ಪೂರ್ಣಗೊಂಡಿದೆ. 32 ಮಂದಿ ಕಳಂಕಿತರು ಎಂದು ಗುರುತಿಸಿ ಅವರ ವಿರುದ್ಧ ಆರೋಪ ಪಟ್ಟಿ ಸಹ ದಾಖಲಿಸಲಾಗಿದೆ. ಹಾಗಾಗಿ ಕಳಂಕಿತರನ್ನು ಮತ್ತು ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಅವಕಾಶ ಇರುವುದರಿಂದ ಮರು ಪರೀಕ್ಷೆ ನಡೆಸುವ ಅಗತ್ಯವಿಲ್ಲ.

ಈಗಾಗಲೇ ಆಯ್ಕೆಯಾಗಿರುವ ನೂರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಲಿದೆ. ಜೊತೆಗೆ ಎಷ್ಟೋ ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿದ್ದು, ಅವರಿಗೆ ಉದ್ಯೋಗ ಲಭಿಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.

ಸರ್ಕಾರದ ಪರ ವಾದಿಸಿದ ವಕೀಲರು, ಪ್ರಕರಣ ವ್ಯಾಪಕವಾಗಿ ಹರಡಿದ್ದು, ಹಲವು ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು ಭಾಗಿಯಾಗಿದ್ದಾರೆ. ಪರೀಕ್ಷೆಯಲ್ಲೇ ಅಕ್ರಮವಾಗಿರುವುದರಿಂದ ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಸಮರ್ಥಿಸಿಕೊಂಡರು.

ಸರ್ಕಾರ ಏಪ್ರಿಲ್​ 29 ರಂದು ಪಿಎಸ್‌ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿತ್ತು. ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಜು.19ರಂದು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಓದಿ:ಬಿಬಿಎಂಪಿ ಮೀಸಲಾತಿ ವಿವಾದ: ಸರ್ಕಾರ ಅಭಿಪ್ರಾಯ ನೀಡುವವರೆಗೂ ವೇಳಾಪಟ್ಟಿ ಪ್ರಕಟಿಸದಂತೆ ಹೈಕೋರ್ಟ್​ ಸೂಚನೆ

ABOUT THE AUTHOR

...view details