ಕರ್ನಾಟಕ

karnataka

ETV Bharat / city

ತೆಲುಗು ಕವಿ ವರವರ ರಾವ್ ಬಂಧಿಸುವುದಿಲ್ಲ ಎಂದ ಸರ್ಕಾರ; ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್ - ಹೈಕೋರ್ಟ್​ನಿಂದ ವರವರ ರಾವ್​ ಕೇಸ್​ ಇತ್ಯರ್ಥ

ತೆಲುಗು ಕವಿ ವರವರರಾವ್​ ಅವರ ಮೇಲಿದ್ದ ಬಂಧನ ವಾರಂಟ್​ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ಇತ್ಯರ್ಥ ಮಾಡಿದೆ. ಸರ್ಕಾರ ತೆಲುಗು ಕವಿಯನ್ನು ಬಂಧಿಸಲ್ಲ ಎಂದು ಹೇಳಿದೆ.

high-court
ಹೈಕೋರ್ಟ್

By

Published : Mar 25, 2022, 7:20 PM IST

ಬೆಂಗಳೂರು:ಬಾಂಬೆ ಹೈಕೋರ್ಟ್ ಅಥವಾ ಎನ್ಐಎ ಕೋರ್ಟ್​ಗೆ ಅರ್ಜಿ ಸಲ್ಲಿಸುವವರೆಗೆ ಬಂಧಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ತೆಲುಗು ಕವಿ ವರವರ ರಾವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಪ್ರಕರಣವೊಂದರಲ್ಲಿ ತುಮಕೂರಿನ ಮಧುಗಿರಿ ನ್ಯಾಯಾಲಯ ಹೊರಡಿಸಿರುವ ವಾರಂಟ್ ರದ್ದು ಕೋರಿ ವರವರ ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, 2005ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನ ಹಳ್ಳಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವ್‌ ಅವರ ವಿರುದ್ಧ ಗಂಭೀರ ಆರೋಪಗಳಿವೆ. ಈ ಕುರಿತಂತೆ ಮಧುಗಿರಿಯ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಅವರ ಅಗತ್ಯವಿದೆ. ಆದರೆ, ರಾವ್ ಅವರು ಪ್ರಸ್ತುತ ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ. ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ವ್ಯಾಪ್ತಿಯನ್ನು ತೊರೆಯಬಾರದು ಎಂಬ ಷರತ್ತಿನ ಮೇಲೆ ಬಾಂಬೆ ಹೈಕೋರ್ಟ್ ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಆಧಾರದಲ್ಲಿ ಜಾಮೀನು ನೀಡಿದೆ.

ಆದ್ದರಿಂದ ರಾವ್ ಅವರು ಮುಂಬೈನ ಎನ್‌ಐಎ ನ್ಯಾಯಾಲಯದ ವ್ಯಾಪ್ತಿಯನ್ನು ತೊರೆಯಬಾರದು ಎಂಬ ಜಾಮೀನು ಷರತ್ತನ್ನು ಸಡಿಲಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಅಗತ್ಯ ಅರ್ಜಿ ಸಲ್ಲಿಸಲಾಗುವುದು. ಅಲ್ಲಿವರೆಗೂ ರಾವ್ ಅವರನ್ನು ಬಂಧಿಸುವುದಿಲ್ಲ ಎಂದು ಎಸ್ಪಿಪಿ ಹೆಗ್ಡೆ ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವರವರ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ:ನಕ್ಸಲರ ಮೇಲಿನ ದಾಳಿ ಖಂಡಿಸಿ ಬೆಂಗಳೂರಿನಲ್ಲಿ ನಡೆಸಿದ್ದ ಸಭೆಯಲ್ಲಿ ವರವರ ರಾವ್ ಭಾಗವಹಿಸಿದ್ದರು. ಆ ಬಳಿಕ 2005ರಲ್ಲಿ ನಕ್ಸಲರು ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್​ಪಿ ಪೊಲೀಸ್ ತುಕಡಿ ಮೇಲೆ ದಾಳಿ ನಡೆಸಿ ಸಾಕಷ್ಟು ಸಾವು ನೋವಿಗೆ ಕಾರಣರಾಗಿದ್ದರು. ಇದಕ್ಕೆ ರಾವ್ ಅವರ ಪ್ರಚೋದನಕಾರಿ ಭಾಷಣವೂ ಕಾರಣ ಎಂಬ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಹಾಜರಾಗುವಂತೆ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶಿಸಿತ್ತು. ಆದರೆ, ರಾವ್ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಈ ಆದೇಶ ರದ್ದು ಕೋರಿ ವರವರ ರಾವ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಜೆಡಿಎಸ್​ನಲ್ಲಿ ಗೊಂದಲದ ವಾತಾವರಣ ಮೂಡಿಸುತ್ತಿದ್ದಾರೆ : ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details