ಕರ್ನಾಟಕ

karnataka

ETV Bharat / city

ಲ್ಯಾಪ್‌ಟಾಪ್, ಮೊಬೈಲ್ ವಶಪಡಿಸಿಕೊಳ್ಳಲು ಮಾನದಂಡ ನಿಗದಿ ಮಾಡಿದ ಹೈಕೋರ್ಟ್.. - ಲ್ಯಾಪ್ ಟಾಪ್ ಮೊಬೈಲ್ ವಶಪಡಿಸಿಕೊಳ್ಳಲು ಮಾನದಂಡ

ಗ್ಯಾಜೆಟ್​ಗಳ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಮೂರ್ಗಸೂಚಿಗಳನ್ನು ರೂಪಿಸಿಲ್ಲ. ಹೀಗಾಗಿ ಸರ್ಕಾರ ತನ್ನದೇ ಮಾರ್ಗಸೂಚಿಗಳನ್ನು ಜಾರಿಗೆ ತರುವವರೆಗೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿದೆ..

high-court-set-the-benchmark-for-seize-lap-top-and-mobile
ಹೈಕೋರ್ಟ್

By

Published : Mar 13, 2021, 3:49 PM IST

ಬೆಂಗಳೂರು : ತನಿಖೆ ವೇಳೆ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್​​ಗಳನ್ನು ವಶಪಡಿಸಿಕೊಳ್ಳುವಾಗ ಅನುಸರಿಸಬೇಕಾದ ಮಾನದಂಡಗಳ ಕುರಿತು ಹೈಕೋರ್ಟ್ ತನಿಖಾಧಿಕಾರಿಗಳಿಗೆ ಕೆಲ ನಿರ್ದೇಶನಗಳನ್ನು ನೀಡಿದೆ.

ಸ್ಯಾಂಡಲ್​ವುಡ್​​ ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ವೀರೇನ್ ಖನ್ನಾಗೆ ಆತನ ಲ್ಯಾಪ್‌ಟಾಪ್, ಮೊಬೈಲ್ ಪಾಸ್ ವರ್ಡ್ ನೀಡುವಂತೆ ಹಾಗೂ ಪಾಲಿಗ್ರಾಫ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಗಾಗುವಂತೆ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು.

ತನಿಖೆಗೆ ಸೂಕ್ತ ಸಹಕಾರ ನೀಡದ ಹಿನ್ನೆಲೆ ನೀಡಿದ್ದ ಈ ಆದೇಶ ಪ್ರಶ್ನಿಸಿ ವೀರೇನ್ ಖನ್ನಾ ಹೈಕೋರ್ಟ್ ಮೆಟ್ಟಿಲೇರಿದ್ದ. ಈತನ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ಪೀಠ ಪೊಲೀಸರಿಗೆ ಕೆಲ ನಿರ್ದೇಶನಗಳನ್ನು ನೀಡಿದೆ.

ಗ್ಯಾಜೆಟ್​ಗಳ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಮೂರ್ಗಸೂಚಿಗಳನ್ನು ರೂಪಿಸಿಲ್ಲ. ಹೀಗಾಗಿ ಸರ್ಕಾರ ತನ್ನದೇ ಮಾರ್ಗಸೂಚಿಗಳನ್ನು ಜಾರಿಗೆ ತರುವವರೆಗೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿದೆ.

ಅಲ್ಲದೇ, ಆರೋಪಿಯ ಒಪ್ಪಿಗೆ ಪಡೆಯದೆ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಆದೇಶಿಸುವುದು ಸಾಧ್ಯವಿಲ್ಲ. ಆತನ ಮೌನವನ್ನು ಒಪ್ಪಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ವಿಚಾರಣಾ ನ್ಯಾಯಾಲದ ಆದೇಶವನ್ನು ರದ್ದುಗೊಳಿಸಿದೆ.

  • ಕೋರ್ಟ್ ನೀಡಿರುವ ನಿರ್ದೇಶನಗಳು
  1. ವಿಧಿವಿಜ್ಞಾನ ಪರೀಕ್ಷಕ - ಪೊಲೀಸರ ತನಿಖೆ ವೇಳೆ ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳಲ್ಲಿನ ಮಾಹಿತಿ ಅಗತ್ಯವಿದ್ದಾಗ ಅವುಗಳನ್ನು ನೇರವಾಗಿ ಪೊಲೀಸರು ನಿರ್ವಹಣೆ ಮಾಡಬಾರದು. ಬದಲಿಗೆ ತನಿಖಾ ತಂಡದಲ್ಲಿ ವಿಧಿವಿಜ್ಞಾನ ಪರೀಕ್ಷಕರನ್ನು ಬಳಸಿಕೊಳ್ಳಬೇಕು. ಅವರು ತನಿಖಾ ತಂಡದ ಸದಸ್ಯರಾಗಿರಬೇಕು.
  2. ಪ್ರತ್ಯೇಕಿಸಿಡಬೇಕು- ವಿಧಿವಿಜ್ಞಾನ ಪರೀಕ್ಷಕರು ಲಭ್ಯವಿಲ್ಲದಿರುವ ಸಂದರ್ಭದಲ್ಲಿ ಕಂಪ್ಯೂಟರನ್ನು ಅನ್ ಪ್ಲಗ್ ಮಾಡಿ, ಅದನ್ನು ವಿದ್ಯುತ್ಕಾಂತೀಯ ಕ್ಷೇತ್ರದ ಸಂಪರ್ಕಕ್ಕೆ ಸಿಗದಂತೆ ಫ್ಯಾರಡೆ ಕವರ್ ಗಳಲ್ಲಿ ಪ್ರತ್ಯೇಕಿವಾಗಿ ರಕ್ಷಿಸಿಡಬೇಕು.
  3. ಪೋಟೋ ತೆಗೆದಿಟ್ಟಿರಬೇಕು.- ಗ್ಯಾಜೆಟ್ ಗಳನ್ನು ಇರಿಸಿರುವ ಸ್ಥಳ, ಅವುಗಳನ್ನು ಹೇಗೆ ಇರಿಸಲಾಗಿದೆ ಎಂಬುದನ್ನು ಬಿಂಬಿಸುವಂತ ಫೋಟೋ ತೆಗೆದು ಇಟ್ಟಿರಬೇಕು.
  4. ಕಂಪ್ಯೂಟರ್ ಆನ್ ಇದ್ದಾಗ- ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ವೇಳೆ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಆನ್ ಇದ್ದು, ಸ್ಕ್ರೀನ್ ಬ್ಲಾಂಕ್ ಇದ್ದರೆ ಮೌಸ್ ಸರಿಸಿ ಸ್ಕ್ರೀನ್ ನಲ್ಲಿ ಮೂಡುವ ಚಿತ್ರಗಳನ್ನು ಫೋಟೋ ತೆಗೆದಿರಿಸಬೇಕು. ಸ್ವಿಚ್ ಆಫ್ ಇದ್ದಾಗ ಆನ್ ಮಾಡಬಾರದು.
  5. ಮೊಬೈಲ್ ಫೋನ್ - ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಾಗ ಮೊಟ್ಟಮೊದಲಿಗೆ ಅವುಗಳ ನೆಟ್ವರ್ಕ್ ಕಡಿತಗೊಳಿಸಬೇಕು. ಹಾಗೆಯೇ ವೈಫೈ ಅಥವಾ ಮೊಬೈಲ್ ಡೇಟಾ ಸಿಗ್ನಲ್ ಗಳನ್ನು ನಿರ್ಬಂಧಿಸಲು ಫ್ಯಾರಡೆ ಕವರ್ ಗಳಲ್ಲಿ ಇರಿಸಬೇಕು.
  6. ತಜ್ಞರ ನೆರವು- ಇನ್ನು ಗ್ಯಾಜೆಟ್ ಗಳ ಪಾಸ್ ವರ್ಡ್ ಗಳನ್ನು ಆರೋಪಿ ನೀಡಬೇಕು. ಆತ ನೀಡದಿದ್ದರೆ ಗ್ಯಾಜೆಟ್ ಗಳ ಪರೀಕ್ಷೆಗೆ ಪೊಲೀಸರು ತಜ್ಞರ ನೆರವು ಪಡೆಯಬೇಕು ಎಂದು ನಿರ್ದೇಶಿಸಿದೆ.

ABOUT THE AUTHOR

...view details