ಕರ್ನಾಟಕ

karnataka

ETV Bharat / city

ಬುದ್ಧಿಮಾಂದ್ಯ ಮಕ್ಕಳು ಜನಿಸಿದ್ದಕ್ಕೆ ಪತ್ನಿಗೆ ಕಿರುಕುಳ: ಪತಿ, ಅತ್ತೆ, ನಾದಿನಿಗೆ ಹೈಕೋರ್ಟ್ ಶಿಕ್ಷೆ - ಬುದ್ಧಿಮಾಂದ್ಯ ಮಕ್ಕಳು ಜನಿಸಿದ್ದಕ್ಕೆ ಮಹಿಳೆಗೆ ಕಿರುಕುಳ ಕೇಸ್​

ಬುದ್ದಿಮಾಂದ್ಯ ಮಕ್ಕಳು ಜನಿಸಿದವು ಎಂಬ ಕಾರಣಕ್ಕಾಗಿ ಹೆಂಡತಿಯನ್ನು ಕ್ರೂರವಾಗಿ ನಡೆಸಿಕೊಂಡು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಪತಿ, ಅತ್ತೆ, ನಾದಿನಿಗೆ ಹೈಕೋರ್ಟ್​ ಶಿಕ್ಷೆ ವಿಧಿಸಿದೆ.

high-court
ಹೈಕೋರ್ಟ್ ಶಿಕ್ಷೆ

By

Published : Apr 26, 2022, 10:26 PM IST

ಬೆಂಗಳೂರು:ಬುದ್ದಿಮಾಂದ್ಯ ಹೆಣ್ಣು ಮಕ್ಕಳು ಹುಟ್ಟಿದವೆಂಬ ಕಾರಣಕ್ಕೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೆ, ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಪತಿ, ಆತನ ತಾಯಿ ಮತ್ತು ಸೋದರಿಗೆ ಹೈಕೋರ್ಟ್ 1 ವರ್ಷ ಜೈಲು ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿದ ಮಂಡ್ಯ ಜಿಲ್ಲಾ ನ್ಯಾಯಾಲಯದ ಆದೇಶ ರದ್ದುಗೊಳಿಸಿ ಶಿಕ್ಷೆ ವಿಧಿಸುವಂತೆ ಕೋರಿ ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವೀರಪ್ಪ ಹಾಗೂ ನ್ಯಾ.ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಮೃತ ಹೇಮಲತಾ ಇಬ್ಬರು ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರೆಂಬ ಕಾರಣಕ್ಕೆ ಪತಿ, ಅತ್ತೆ ಹಾಗೂ ನಾದಿನಿ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದರು ಎಂಬುದು ಪ್ರಾಸಿಕ್ಯೂಷನ್‌ ಸಾಕ್ಷ್ಯಗಳಿಂದ ರುಜುವಾತಾಗಿದೆ. ಪತ್ನಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊಂದಿರುವ ಪತಿ ಮಾದೇಶ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಕಿರುಕುಳ ನೀಡಿದ ಅಪರಾಧಕ್ಕೆ ಆರೋಪಿಗಳಿಗೆ ತಲಾ ಒಂದು ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಿದೆ. ಅಲ್ಲದೇ, ದಂಡದ ಮೊತ್ತವನ್ನು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ಮಾದೇಶ- ಹೇಮಲತಾ ದಂಪತಿಗೆ ವಿವಾಹವಾದ 6 ವರ್ಷಗಳ ಬಳಿಕ ಇಬ್ಬರು ಬುದ್ಧಿಮಾಂದ್ಯ ಹೆಣ್ಣು ಮಕ್ಕಳು ಜನಿಸಿದ್ದರು. ಇದು ಪತಿ, ಅತ್ತೆ ಹಾಗೂ ನಾದಿನಿಗೆ ಅಸಮಾಧಾನ ಉಂಟು ಮಾಡಿತ್ತು. ಅಲ್ಲದೇ, ಹೇಮಲತಾಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. 2012ರ ನವೆಂಬರ್ 28ರ ಸಂಜೆ ಪತಿಯಿಂದ ಮನೆ ಖರ್ಚಿಗೆ ಹಣ ಕೇಳಿದ್ದಕ್ಕೆ ಗಲಾಟೆ ಮಾಡಿದ್ದ ಪತಿ ಮಾದೇಶ ಪತ್ನಿ ಹೇಮಲತಾ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದ.

ಜೊತೆಗೆ, ಕೂಲಿ ಮಾಡಿ ಸಂಸಾರ ನಡೆಸುವಂತೆ ಸೂಚಿಸಿದ್ದ. ನಂತರ, ಅತ್ತೆ ಹಾಗೂ ನಾದಿನಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೇಮಲತಾ ಮೇಲೆ ಸೀಮೆ ಎಣ್ಣೆ ಎರಚಿ ಬೆಂಕಿ ಹಚ್ಚಿದ್ದರು. ನಂತರ ಪತಿ ಬೆಂಕಿ ಆರಿಸಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದನಾದರೂ, ಚಿಕಿತ್ಸೆ ಫಲಿಸದೆ ಹೇಮಲತಾ ಮೃತಪಟ್ಟರೆಂದು ಪೊಲೀಸರು ಆರೋಪಿಸಿದ್ದರು. ಹಾಗೆಯೇ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 498ಎ, 302 ಅಡಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಮಂಡ್ಯ ಜಿಲ್ಲಾ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಹೇಮಲತಾ ಸಾವಿಗೆ ಮುನ್ನ ನೀಡಿದ್ದ ಹೇಳಿಕೆಯಲ್ಲಿನ ಗೊಂದಲಗಳು ಹಾಗೂ ಸಾಕ್ಷಿದಾರರ ಪ್ರತಿಕೂಲ ಹೇಳಿಕೆಗಳಿಂದಾಗಿ ಕೋರ್ಟ್ ಖುಲಾಸೆ ಮಾಡಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್​ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಸಾವಿಗೆ ಸಾಕ್ಷ್ಯಗಳು ಸ್ಪಷ್ಟವಿಲ್ಲದಿದ್ದರೂ, ಕಿರುಕುಳ ನೀಡಿರುವುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ಓದಿ:ಜುವೆಲ್ಲರಿ ಎಕ್ಸಿಬಿಷನ್​​ನಲ್ಲಿ ಚಿನ್ನದ ಮಾಸ್ಕ್​​​: ಕೇವಲ 2 ದಿನದಲ್ಲಿ 10 ಕೆಜಿ ಬಂಗಾರ ಮಾರಾಟ

ABOUT THE AUTHOR

...view details