ಕರ್ನಾಟಕ

karnataka

ETV Bharat / city

ರಾಜ್ಯ ಇದೀಗ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ: ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ - bangalore news

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೊರೊನಾ ನಿರ್ವಹಣೆಗೆ ತಜ್ಞರ ಸಮಿತಿ ರಚಿಸುವಲ್ಲಿ ನಿರ್ಲಕ್ಷ್ಯವಹಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

High Court resentment against government
ರಾಜ್ಯ ಇದೀಗ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ: ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

By

Published : Jul 30, 2020, 10:25 PM IST

ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೊರೊನಾ ನಿರ್ವಹಣೆಗೆ ತಜ್ಞರ ಸಮಿತಿ ರಚಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, 'ಸೋಂಕು ನಿರ್ವಹಣೆಯಲ್ಲಿ ಆಡಳಿತ ಯಂತ್ರ ಕುಸಿದಿದೆ, ಬೆಸ್ಟ್ ಇದ್ದ ರಾಜ್ಯ ಈಗ ವರ್ಸ್ಟ್ ಸ್ಥಿತಿಗೆ ಬಂದಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಹಿಂದಿನ ವಿಚಾರಣೆಗಳ ಸಂದರ್ಭದಲ್ಲಿ ಕೊರೊನಾ ನಿರ್ವಹಣೆಗೆ ಸುಪ್ರೀಂ ನಿರ್ದೇಶನದ ಅನುಸಾರ ತಜ್ಞರ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಇಂದು ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯದ ಅನುಪಾಲನಾ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ಪೀಠ, ತಜ್ಞರ ಸಮಿತಿಯಲ್ಲಿ ವೈದ್ಯಕೀಯ ಕ್ಷೇತ್ರ ಹೊರತುಪಡಿಸಿ ಬೇರಾವುದೇ ಕ್ಷೇತ್ರಗಳ ತಜ್ಞರನ್ನು ಸೇರಿಸದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಹೇಳಿದಂತೆ ತಜ್ಞರ ಸಮಿತಿ ರಚಿಸಿಲ್ಲ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಆರಂಭದಲ್ಲಿ ಬೆಸ್ಟ್ ಇದ್ದ ನಮ್ಮ ರಾಜ್ಯ ಇದೀಗ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ. ಸರ್ಕಾರ ಕೇವಲ ಮೊಸಳೆ ಕಣ್ಣೀರು ಹಾಕುತ್ತಿರುವಂತೆ ಕಾಣುತ್ತಿದೆ. ನಿದ್ರೆ ಮಂಪರಿನಿಂದ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯವೇ ಸ್ವತಂತ್ರ ತಜ್ಞರ ಸಮಿತಿ ರಚನೆಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಅಲ್ಲದೆ, ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ನೀಡಲು ಮತ್ತು ಮೇಲ್ವಿಚಾರಣೆ ನಡೆಸಲು ಎಲ್ಲ ರಾಜ್ಯಗಳು ವೈದ್ಯಕೀಯ ಕ್ಷೇತ್ರದ ತಜ್ಞರಷ್ಟೇ ಅಲ್ಲದೆ, ಇತರೆ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಿರ್ದೇಶನ ನೀಡಿ ತಿಂಗಳು ಕಳೆದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್ ತಾಕೀತು ಮಾಡಿದ ಮೇಲೆ ಬರೀ ವೈದ್ಯಕೀಯ ಕ್ಷೇತ್ರದ ತಜ್ಞರನ್ನಷ್ಟೇ ಸೇರಿಸಿ ಸಮಿತಿ ರಚಿಸಿದೆ. ಬೇರೆ ಕ್ಷೇತ್ರದ ತಜ್ಞರನ್ನು ಒಳಗೊಳ್ಳದೆ ಇದ್ದರೆ ಸಮಿತಿಯು ದಕ್ಷವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ. ಸರ್ಕಾರಕ್ಕೆ ಇಷ್ಟು ತಿಳಿಯದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೆ ಸ್ಪಷ್ಟನೆ ನೀಡಿದ ಸರ್ಕಾರದ ಪರ ವಕೀಲರು ಒಂದೇ ಸಮಿತಿ ಎಲ್ಲವನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಿವಿಧ ತಜ್ಞರನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯಮಟ್ಟದ ತಜ್ಞರ ಸಮಿತಿಯನ್ನು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾಕ್ಟರ್ ಸಿ.ಎನ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ಇದರಲ್ಲಿ 11 ಮಂದಿ ತಜ್ಞ ವೈದ್ಯ ಸದಸ್ಯರಿದ್ದಾರೆ. ಇನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ರಾಜಧಾನಿಯಲ್ಲಿ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details