ಬೆಂಗಳೂರು:ದೇಶದ ನೌಕಾದಳದ ಮಾಹಿತಿಯನ್ನು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐನೊಂದಿಗೆ ಹಂಚಿಕೊಂಡ ಗಂಭೀರ ಆರೋಪದಲ್ಲಿ ಬಂಧಿತನಾಗಿರುವ ಜಿತೇಂದರ್ ಸಿಂಗ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿತು.
ಪಾಕಿಸ್ತಾನದ ಗುಪ್ತಚರ ದಳಕ್ಕೆ ಅರ್ಜಿದಾರ ಮಾಹಿತಿ ಹಂಚಿಕೊಂಡಿರುವುದು ದಾಖಲೆಯಿಂದ ಸ್ಪಷ್ಟವಾಗುತ್ತದೆ. ಇದು ಭಾರತದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆ. ದೇಶದ ಸಮಗ್ರತೆ ಹಾಗೂ ಸಾರ್ವಭೌಮತ್ವದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಬೆಂಗಳೂರು ಪೊಲೀಸರು 2021ರ ನವೆಂಬರ್‌ನಲ್ಲಿ ಜಿತೇಂದರ್ ಸಿಂಗ್‌ನನ್ನು ಬಂಧಿಸಿದ್ದು, ಸೇನಾ ಸಮವಸ್ತ್ರ, ವಾಟ್ಸಾಪ್ ಸಂದೇಶ ಹಾಗೂ ಕೆಲ ಫೋಟೊಗಳನ್ನು ಜಪ್ತಿ ಮಾಡಿದ್ದರು. ಈತ ತನ್ನ ಫೋನ್ ಮೂಲಕ ಐಎಸ್‌ಐಗೆ ಸೇರಿದ ಪೂಜಾ ಮತ್ತು ನಕಾಶ್ ಎಂಬುವರನ್ನು ಸಂಪರ್ಕಿಸಿ, ಭಾರತೀಯ ಸೇನೆ, ವಾಯುಸೇನೆ ಹಾಗೂ ನೌಕದಳಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡಿದ್ದರ ಬಗ್ಗೆ ಕೆಲವು ಮಹತ್ವದ ಸಾಕ್ಷಾಧಾರ ಲಭ್ಯವಾಗಿತ್ತು.
ಪೊಲೀಸರು ಜಪ್ತಿ ಮಾಡಿರುವ 78 ಮೊಬೈಲ್ ಸಂದೇಶಗಳ ಪೈಕಿ 30 ಸಂದೇಶಗಳು ಪಾಕಿಸ್ತಾನದ ಗುಪ್ತದಳದ ಕಾರ್ಯನಿರ್ವಾಹಕರಿಂದ ಸ್ವೀಕರಿಸಿದ್ದಾನೆ. 24 ಸಂದೇಶಗಳು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ. 8 ಫೋಟೊ ಸ್ವೀಕರಿಸಿದ್ದು, ಪೂಜಾಗೆ ನಾಲ್ಕು ವಿಡಿಯೋ ಕರೆ ಮಾಡಿದ್ದಾನೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವರ್ಗಾವಣೆ