ಬೆಂಗಳೂರು: 2008ರಲ್ಲಿ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಪದ್ಮನಾಭಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಈ ಕುರಿತಂತೆ ಅಧಿಕಾರಿ ಪದ್ಮನಾಭ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ. ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ, ಅಧಿಕಾರಿಗೆ ಶಿಕ್ಷೆ ವಿಧಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಕಾಯಂಗೊಳಿಸಿದೆ.
2008ರ ಡಿಸೆಂಬರ್‌ನಲ್ಲಿ ರಾಯಪುರದಿಂದ ಕೊಪ್ಪಳಕ್ಕೆ 40 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ವಿಜಯಪುರ ಜಿಲ್ಲೆಯ ಧೂಳೇಡ್ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ (ಸಿಟಿಒ) ಪದ್ಮನಾಭ ವಾಹನವನ್ನು ಬಿಡುಗಡೆ ಮಾಡಲು 15 ಲಕ್ಷ ರೂ. ಲಂಚ ಕೇಳಿದ್ದರು. ನಂತರ 5 ಲಕ್ಷ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
2015ರ ಏಪ್ರಿಲ್ 6ರಂದು ವಿಜಯಪುರದ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ಪದ್ಮನಾಭ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ದೋಷಿ ಎಂದು ತೀರ್ಮಾನಿಸಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತ್ತು. ಅಲ್ಲದೇ, ಸೆಕ್ಷನ್ 13(1)(ಡಿ) ಅಡಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ದಂಡ ಹಾಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಪದ್ಮನಾಭ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ, ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್, ವಾಣಿಜ್ಯ ತೆರಿಗೆ ಕಚೇರಿಯನ್ನು ಭ್ರಷ್ಟಾಚಾರದ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಬಡ ಚಾಲಕರು ಪ್ರತಿದಿನವೂ ಅಕ್ರಮ ಬೇಡಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅಧಿಕಾರಿಗಳ ದುರಾಸೆ ವಿಪರೀತವಾದಾಗ ಮಾತ್ರವೇ ಇಂತಹ ಪ್ರಕರಣಗಳು ಮೇಲಾಧಿಕಾರಿಗಳು ಅಥವಾ ಲೋಕಾಯುಕ್ತರನ್ನು ತಲುಪುತ್ತವೆ. ಕೆಲವೇ ಕೆಲವು ಪ್ರಕರಣಗಳು ಮಾತ್ರ ತಾರ್ಕಿಕ ಅಂತ್ಯಕ್ಕೆ ಬರುತ್ತವೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಉಳಿದ ಶಿಕ್ಷೆಯನ್ನು ಅನುಭವಿಸಲು ಮಾರ್ಚ್ 15 ಅಥವಾ ಅದಕ್ಕೂ ಮೊದಲು ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಪದ್ಮನಾಭ ಅವರಿಗೆ ಸೂಚಿಸಿದೆ.