ಬೆಂಗಳೂರು:ಮುುನ್ಸಿಪಾಲಿಟಿಯ ನಾಮ ನಿರ್ದೇಶಿತ ಸದಸ್ಯರು ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ಮತ ಹಾಕುವ ಹಕ್ಕು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಸಂವಿಧಾನದ ವಿಧಿ 243 ಆರ್(2)(ಎ) ಹಾಗೂ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 11(ಬಿ) ನಿಯಮಗಳನ್ನು ಎತ್ತಿಹಿಡಿದಿದೆ.
ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮತ ಪರಿಗಣಿಸಲು ಕೋರಿ 6 ಮಂದಿ ನಾಮನಿರ್ದೇಶಿತ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ಹಾಗೂ ನ್ಯಾ.ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಜನರಿಂದ ನೇರವಾಗಿ ಮತ ಪಡೆದು ಆಯ್ಕೆಯಾದ ಸದಸ್ಯರು ಜನರ ಆದೇಶದೊಂದಿಗೆ ಬಂದಿರುತ್ತಾರೆ. ಆದರೆ, ನಾಮನಿರ್ದೇಶತ ಸದಸ್ಯರನ್ನು ನೇಮಕ ಮಾಡಲಾಗಿರುತ್ತದೆ. ಹೀಗಾಗಿ, ಇಬ್ಬರೂ ಮುನ್ಸಿಪಾಲಿಟಿ ಸದಸ್ಯರೇ ಆದರೂ ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಒಂದೇ ವರ್ಗಕ್ಕೆ ಸೇರಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ, ನಾಮನಿರ್ದೇಶಿತ ಸದಸ್ಯರು ಮುನ್ಸಿಪಾಲಿಟಿ ಸಭೆಯಲ್ಲಿ ಮತ ಹಾಕದಂತೆ ನಿರ್ಬಂಧಿಸುವ ಸಂವಿಧಾನದ ವಿಧಿ 243ಆರ್(2)(ಎ) ವಿಧಿ 14ರ ಸಮಾನತೆಗೆ ವಿರುದ್ಧವಾಗಿಲ್ಲ.