ಬೆಂಗಳೂರು :ವಶಪಡಿಸಿಕೊಂಡಿದ್ದ ಕಾರು ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 12 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪೊಲೀಸ್ ಪೇದೆಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ತಿಮ್ಮೇಗೌಡ ಅಲಿಯಾಸ್ ಚಂದ್ರಣ್ಣ ಎಂಬುವರಿಂದ ಹಣ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸಿಕ್ಕಿ ಬಿದ್ದು, ನ್ಯಾಯಾಂಗ ಬಂಧನದಲ್ಲಿರುವ ಪೇದೆ ನಯಾಜ್ ಅಹ್ಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ಧ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ ಲಂಚ ಸ್ವೀಕರಿಸಿರುವ ಆರೋಪದಡಿ ಬಂಧಿತನಾಗಿರುವ ಪೇದೆ ನಯಾಜ್ ಅಹ್ಮದ್ ವಿರುದ್ಧದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಪ್ರಕರಣದಲ್ಲಿ ಈಗಾಗಲೇ ಸಬ್ ಇನ್ಸ್‌ಪೆಕ್ಟರ್ ಸೋಮಶೇಖರ್ಗೆ ಜಾಮೀನು ನೀಡಲಾಗಿದೆ ಎಂಬ ಅಂಶವನ್ನು ಪರಿಗಣಿಸಲು ಸಾಧ್ಯವಿಲ್ಲ.
ಆರೋಪಿ ಪೇದೆ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಲಂಚದ ಹಣವನ್ನು ಕೂಡ ಜಪ್ತಿ ಮಾಡಲಾಗಿದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚಿದಯ್ಯನಪಾಳ್ಯ ನಿವಾಸಿ ಚಂದ್ರಣ್ಣ ಅಲಿಯಾಸ್ ತಿಮ್ಮೇಗೌಡ ಎಂಬುವರ ವಿರುದ್ಧ ಚಂದ್ರಶೇಖರಪುರ (ಸಿಎಸ್ ಪುರ) ಪೊಲೀಸ್ ಠಾಣೆಗೆ ಅವರ ಮಾವ ದೂರು ನೀಡಿದ್ದರು.
ಮಗಳ ವಿಚಾರವಾಗಿ ತನ್ನ ಮೇಲೆ ಹಲ್ಲೆ ಮಾಡಿದರೆಂದು ಆರೋಪಿಸಿ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಚಂದ್ರಣ್ಣನನ್ನು ಬಂಧಿಸಿ, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ನಂತರ ಚಂದ್ರಣ್ಣ, ಪೊಲೀಸರು ವಶಪಡಿಸಿಕೊಂಡಿದ್ದ ತನ್ನ ಕಾರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರೂ ಪೊಲೀಸರು ಬಿಡುಗಡೆ ಮಾಡಿರಲಿಲ್ಲ. ಈ ವೇಳೆ ಪೊಲೀಸರು 30 ಸಾವಿರ ಲಂಚ ಕೇಳಿ ನಂತರ 10 ಸಾವಿರಕ್ಕೆ ಒಪ್ಪಿದ್ದರು.
ಎಸ್ಐ ಸೂಚನೆ ಮೇರೆಗೆ ಠಾಣೆಯ ಪೇದೆ ನಯಾಜ್ ಬೈಕ್ನಲ್ಲಿ ತೆರಳಿ ಚಂದ್ರಣ್ಣನಿಂದ 10 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ಪಿಎಸ್ಐ ಸೋಮಶೇಖರ್‌ನನ್ನು ಬಂಧಿಸಿದ್ದರು.
ನಂತರ ಲಂಚ ಕುದುರಿಸಲು ಮಧ್ಯಸ್ಥಿಕೆ ವಹಿಸಿದ್ದ ಹೆಡ್ಕಾನ್ಸ್ಟೇಬಲ್ ಕೇಶವಮೂರ್ತಿ ಒಳಗೊಂಡು ಎಸ್ಐ ಸೋಮಶೇಖರ್ ಹಾಗೂ ಪೇದೆ ನಯಾಜ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 7ಎ ಅಡಿಯಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುಮಕೂರಿನ 7ನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ನಂತರ ಆರೋಪಿ ನಯಾಜ್ ಅಹ್ಮದ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಇದೀಗ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಇದನ್ನೂ ಓದಿ:ಮತಾಂತರ ನಿಷೇಧ.. ಸುಗ್ರೀವಾಜ್ಞೆ ಹೊರಡಿಸದಿರಲು ನಿರ್ಧಾರ: ಜಂಟಿ ಅಧಿವೇಶನದಲ್ಲೇ ಅಂಗೀಕರಿಸಲು ಸರ್ಕಾರದ ಸಿದ್ಧತೆ