ಬೆಂಗಳೂರು:ಹಿರಿಯ ನಾಗರಿಕರಿಗೆ ನೀಡುತ್ತಿರುವ ವೃದ್ಧಾಪ್ಯ ವೇತನವನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿರುವ ಹೈಕೋರ್ಟ್, ವಯೋವೃದ್ಧರಿಗೆ ಇರುವ ಪಿಂಚಣಿ ಯೋಜನೆಗಳು ಹಾಗೂ ಅವುಗಳನ್ನು ಅನುಷ್ಠಾನಗೊಳಿಸುತ್ತಿರುವ ರೀತಿಯನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ವೃದ್ಧಾಪ್ಯ ವೇತನ ಪಾವತಿ ವಿಳಂಬಕ್ಕೆ ಆಕ್ಷೇಪಿಸಿ ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ರೂಪಿಸಿರುವ ಕೊರೊನಾ ಮಾರ್ಗಸೂಚಿಗಳ ಪ್ರಕಾರ 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಮನೆಯಿಂದ ಹೊರ ಬರಬಾರದು. ಅದರಂತೆ ಹಿರಿಯ ನಾಗರಿಕರಿಗೆ ನೀಡುವ ವೃದ್ಧಾಪ್ಯ ವೇತನವನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕು. ಹೀಗಾಗಿ ಪಿಂಚಣಿಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.
ಅಲ್ಲದೆ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ನೀಡುವ ಸಂಬಂಧ ಇರುವ ಯೋಜನೆಗಳು ಯಾವುವು, ಅವುಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದರ ವಿವರಗಳನ್ನು ಮುಂದಿನ ವಿಚಾರಣೆ ಒಳಗೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.