ಬೆಂಗಳೂರು: ನ್ಯಾಯಾಲಯಗಳ ದಾಖಲೆಗಳನ್ನು ತಿರುಚಿ, ನಕಲಿ ವ್ಯಾಜ್ಯಗಾರರನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(forensic laboratory) ಕಳುಹಿಸಲು ಹೈಕೋರ್ಟ್(high court) ಸಮ್ಮತಿಸಿದೆ.
ನಗರದ ಶಾ ಹರಿಲಾಲ್ ಬಿಕಾಬಾಯಿ ಎಂಬುವವರಿಗೆ ಸೇರಿದ ಆಸ್ತಿಯನ್ನು ಮಾಲೀಕರ ಗಮನಕ್ಕೆ ಬರದೆ ಕೆಲ ವ್ಯಕ್ತಿಗಳು ಕಬಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅಮೈಕಸ್ ಕ್ಯೂರಿ ಶ್ರೀಧರ್ ಪ್ರಭು ವಾದ ಮಂಡಿಸಿ, ಆಸ್ತಿ ಕಬಳಿಕೆ ಪ್ರಕರಣದಲ್ಲಿ ನೋಟರಿ ದಾಖಲೆಗಳನ್ನು ಬಳಸಲಾಗಿದೆ. ಕೆಲ ವಕೀಲರು, ಕೆಲ ನೋಟರಿಗಳು ಶಾಮೀಲಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇಂತಹ ಅಕ್ರಮಗಳನ್ನು ತಡೆಯಲು ನೋಟರಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಅಗತ್ಯವಿದೆ. ನೋಟರಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಅಗತ್ಯವಿದ್ದು, ಕೇಂದ್ರವನ್ನೂ ಪ್ರಕರಣದಲ್ಲಿ ಪ್ರತಿವಾದಿಯಾಗಿಸಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಅಂತಿಮ ಆದೇಶದ ವೇಳೆ ಈ ಬಗ್ಗೆ ಪರಿಗಣಿಸುವುದಾಗಿ ತಿಳಿಸಿತಲ್ಲದೇ, ಸದ್ಯಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ದಾಖಲೆಗಳನ್ನು ಪರೀಕ್ಷಿಸಲು ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತನಿಖಾಧಿಕಾರಿಗಳಿಗೆ ಅನುಮತಿ ನೀಡಿತು. ಹಾಗೆಯೇ, ತನಿಖೆ ಪ್ರಗತಿ ವರದಿ ಸಲ್ಲಿಸಲು ಸಿಐಡಿ ಪೊಲೀಸರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.