ಬೆಂಗಳೂರು: ವಿವಾದಿತ ವಿಡಿಯೋ ಪ್ರಕರಣದಲ್ಲಿ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರನ್ನು ವಿಚಾರಣೆಗೆ ಹಾಜರಾಗಲು ಒತ್ತಡ ಹೇರುತ್ತಿರುವ ಉತ್ತರ ಪ್ರದೇಶದ ಲೋನಿ ಬಾರ್ಡರ್ ಠಾಣೆ ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಗಾಜಿಯಾಬಾದ್ ನ ಲೋನಿ ಬಾರ್ಡರ್ ಠಾಣೆ ಪೊಲೀಸರು ಸಿಆರ್ಪಿಸಿ ಸೆಕ್ಷನ್ 41ರ ಅಡಿ ನೀಡಿರುವ ನೋಟಿಸ್ ರದ್ದುಪಡಿಸಲು ಕೋರಿ ಮನೀಶ್ ಮಹೇಶ್ವರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠದ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರು ವಾದ ಆಲಿಸಿದ ಪೀಠ, ಉತ್ತರ ಪ್ರದೇಶ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಟ್ವಿಟರ್ ನಲ್ಲಿ ವಿಡಿಯೋಗಳನ್ನು ಹಾಕದಂತೆ ತಡೆಯುವ ಅಥವಾ ಹಾಕಿದ್ದನ್ನು ತೆಗೆಯುವ ಅಧಿಕಾರ ಟ್ವಿಟ್ಟರ್ ಇಂಡಿಯಾಗೆ ಇದೆಯೇ? ಪ್ರಕರಣದಲ್ಲಿ ಟ್ವಿಟ್ಟರ್ ಇಂಡಿಯಾ ವಿರುದ್ಧ ಇರುವ ಆರೋಪವೇನು? ಈ ಪ್ರಕರಣದಲ್ಲಿ ಐಟಿ ನಿಯಮಗಳನ್ನು ಹೇಗೆ ಸೇರಿಸಿದ್ದಾರೆ? ಟ್ವಿಟ್ಟರ್ ಐಎನ್‌ಸಿ ಮತ್ತು ಟ್ವಿಟ್ಟರ್ ಇಂಡಿಯಾವನ್ನು ಹೇಗೆ ಒಂದೇ ಎಂದು ಪರಿಗಣಿಸಿದ್ದೀರಿ ಎಂದು ಯುಪಿ ಪೊಲೀಸರನ್ನು ಪೀಠ ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ, ಇಂತಹ ಘಟನೆಗಳನ್ನು ತಡೆಯಲು ಟ್ವಿಟರ್ಗೆ ಸಾಧ್ಯವಿದೆ ಹಾಗೂ ಈ ಘಟನೆಗೆ ಟ್ವಿಟ್ಟರ್ ಇಂಡಿಯಾ ಹೊಣೆ ಎಂಬುದನ್ನು ಹೇಗೆ ಸಾಬೀತುಪಡಿಸುತ್ತೀರಿ? ಟ್ವಿಟ್ಟರ್‌ನಿಂದ ಅಪರಾಧ ಕೃತ್ಯ ನಡೆದಿದೆ ಎಂಬುದನ್ನು ತೋರಿಸಲು ಸಾಕ್ಷ್ಯ ಇದೆಯೇ? ಎಂದು ಪ್ರಶ್ನಿಸಿದ ಪೀಠ ಪೊಲೀಸರು ಪ್ರಕರಣದ ಮೂಲ ಸತ್ಯಾಂಶವನ್ನೇ ತಿಳಿದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರರು ಟ್ವಿಟರ್ ಇಂಡಿಯಾದಲ್ಲಿ ಓರ್ವ ಉದ್ಯೋಗಿಯಷ್ಟೇ. ಅಪ್ ಲೋಡ್ ಮಾಡಲಾದ ವಿಡಿಯೋ ಮೇಲೆ ಇವರಿಗೆ ಯಾವುದೇ ನಿಯಂತ್ರಣ ಹೊಂದಿಲ್ಲ. ಕೆಲ ಪತ್ರಕರ್ತರು ಹಾಗೂ ರಾಜಕಾರಣಿಗಳು ವಿಡಿಯೋವನ್ನು ಟ್ವಿಟ್ಟರ್ ವೇದಿಕೆಯಲ್ಲಿ ಹಾಕಿದ್ದಾರೆ. ಪ್ರಕರಣದಲ್ಲಿ ಅರ್ಜಿದಾರರ ತಪ್ಪಿಲ್ಲ. ಹಾಗೆಯೇ, ಪ್ರಕರಣ ಐಟಿ ಕಾಯ್ದೆ ವ್ಯಾಪ್ತಿಗೂ ಬರುವುದಿಲ್ಲ. ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿದಾರರನ್ನು ವಿಚಾರಣೆ ನಡೆಸಲು ಹೈಕೋರ್ಟ್ ಸೂಚಿಸಿದ್ದರೂ ಯುಪಿ ಪೊಲೀಸರು ವಿಚಾರಣೆ ನಡೆಸಿಲ್ಲ. ಬಂಧಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದರೆ ಅವರು ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ :
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ತಾಯಿತ ಮಾರುವ ಮುಸ್ಲಿಂ ವೃದ್ಧನಿಗೆ ಆರು ಜನರ ಗುಂಪೊಂದು ಥಳಿಸಿ ಬಲವಂತವಾಗಿ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಎಂದು ಹೇಳಿಸಿದರು ಎನ್ನಲಾದ ವಿವಾದಿತ ವಿಡಿಯೋವೊಂದನ್ನು ಟ್ವಿಟರ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಗಾಜಿಯಾಬಾದ್‌ನ ಲೋನಿ ಬಾರ್ಡರ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳುವಂತೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ಪೊಲೀಸರು ಸೂಚಿಸಿದ್ದರು. ಅದಕ್ಕೆ ನಿರಾಕರಿಸಿದ್ದ ಮನೀಶ್, ವಿಡಿಯೋ ಕಾನ್ಛರೆನ್ಸ್ ಮೂಲಕ ಹೇಳಿಕೆ ನೀಡುವುದಾಗಿ ತಿಳಿಸಿದ್ದರು. ಅದನ್ನು ಒಪ್ಪದ ಪೊಲೀಸರು ಖುದ್ದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸಿಆರ್ ಪಿಸಿ ಸೆಕ್ಷನ್ 41ರ ಅಡಿ ನೋಟಿಸ್ ಜಾರಿಗೊಳಿಸಿದ್ದರು.