ಬೆಂಗಳೂರು: 2019ರ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ಅಂತಾರಾಷ್ಟ್ರೀಯ ಏರ್ ಶೋ ವೇಳೆ ಸಂಭವಿಸಿದ್ದ ಅಗ್ನಿ ಅವಘಡ ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಮುಂದಿನ ಒಂದು ತಿಂಗಳ ಒಳಗೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಗ್ನಿ ಅವಘಡವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ.ಅತ್ರಿ ಹಾಗೂ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, 2021ರ ಫೆಬ್ರವರಿಯಲ್ಲಿ ಮತ್ತೆ ಏರ್ ಶೋ ನಡೆಯಲಿದೆ. ಹೀಗಾಗಿ ಈ ಹಿಂದೆ ನಡೆದಂತಹ ಅವಘಡಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.