ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕೆಂದು ರಾಜ್ಯ ಹೈಕೋರ್ಟ್ ಆದೇಶಿಸಿದೆ. ಮಹಿಳಾ ರಕ್ಷಣಾ ಕಾಯ್ದೆಯ ಸೆಕ್ಷನ್ 12 ರಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಆರು ತಿಂಗಳಲ್ಲಿ ಇತ್ಯರ್ಥ ಪಡಿಸಬೇಕೆಂದು ಕೋರ್ಟ್ ಸೂಚಿಸಿದೆ.
ಜೀವನಾಂಶ ಕೋರಿ ಬೆಂಗಳೂರಿನ 3ನೇ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ ತಾವು ಸಲ್ಲಿಸಿದ ಅರ್ಜಿಯ ವಿಚಾರಣೆ ವಿಳಂಬವಾಗುತ್ತಿದೆ ಎಂದು ನಗರದ ರಾಜಮ್ಮ ಎಂಬುವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿತು.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ-2005ರ ಸೆಕ್ಷನ್ 12ರಡಿ ಮಹಿಳೆಯರು ಜೀವನಾಂಶ ಕೋರಿ ಅರ್ಜಿ ಸಲ್ಲಿಸಬಹುದು. ಸೆಕ್ಷನ್ 12(5)ರ ಪ್ರಕಾರ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಆದರೆ, ಪ್ರಕರಣದಲ್ಲಿ ಅರ್ಜಿದಾರ ಮಹಿಳೆ ಜೀವನಾಂಶ ಕೋರಿ 2021ರ ನ.12ರಂದು ಅರ್ಜಿ ಸಲ್ಲಿಸಿದ್ದಾರೆ. ಆ ಸಂಬಂಧ ಮಹಿಳೆಯ ಪತಿಗೆ 2021ರ ಡಿ.20ರಂದು ಮ್ಯಾಜಿಸ್ಪ್ರೇಟ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೂ ಆ ಅರ್ಜಿಯನ್ನು ಮ್ಯಾಜಿಸ್ಪ್ರೇಟ್ ಕೋರ್ಟ್ ಇತ್ಯರ್ಥಪಡಿಸಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಅರ್ಜಿದಾರರಾದ ರಾಜಮ್ಮ ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ನ ಈ ಆದೇಶದ ಪ್ರತಿ ಲಭ್ಯವಾದ ದಿನದಿಂದ ಎರಡು ವಾರದಲ್ಲಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅರ್ಜಿದಾರರ ಪರ ವಕೀಲ ಡಿ.ಮೋಹನ್‌ಕುಮಾರ್ ವಾದ ಮಂಡಿಸಿದ್ದರು.
ಇದನ್ನೂ ಓದಿ:ರಾಜ್ಯದಲ್ಲಿನ್ನೂ ಓಮಿಕ್ರಾನ್ ತಳಿಗಳು ಪ್ರಾಬಲ್ಯ ಹೊಂದಿವೆ: ಸಚಿವ ಸುಧಾಕರ್ ಟ್ವೀಟ್