ಬೆಂಗಳೂರು:ಗುರು ರಾಘವೇಂದ್ರ ಬ್ಯಾಂಕ್ಗೆ ಸೇರಿದ ಎಲ್ಲ ಆಸ್ತಿಗಳನ್ನು ಮುಂದಿನ ಜನವರಿ 8ರೊಳಗೆ ಜಪ್ತಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಬ್ಯಾಂಕ್ ಹಗರಣದ ತನಿಖೆ ಕೋರಿ ಕೆ.ಆರ್.ನರಸಿಂಹಮೂರ್ತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಠೇವಣಿದಾರರ ಹಿತದೃಷ್ಟಿಯಿಂದ ಬ್ಯಾಂಕ್ನ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಕೆಪಿಐಡಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು. ಈ ವರದಿಯನ್ನು ಜ. 8ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಅಲ್ಲದೆ ಈ ಹಿಂದೆ ಆರ್ಬಿಐ ಸಲಹೆ ಮೇರೆಗೆ ಬ್ಯಾಂಕ್ಗೆ ಹೊಸ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಅವರಿಗೆ ಬ್ಯಾಂಕ್ನ ಬಾಕಿ ಸಾಲ ವಸೂಲಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವರದಿ ನೀಡಲು ನವೆಂಬರ್ 20ರಂದು ನಿರ್ದೇಶಿಸಲಾಗಿತ್ತು. ಆದರೆ, ಅಧಿಕಾರಿ ಈವರೆಗೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಯಾವುದೇ ವರದಿ ನೀಡಿಲ್ಲ. ಹೀಗಾಗಿ ಆಡಳಿತಾಧಿಕಾರಿ ಮುಂದಿನ ವಿಚಾರಣೆ ವೇಳೆ ತಪ್ಪದೇ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿತು.