ಕರ್ನಾಟಕ

karnataka

ETV Bharat / city

ಬೀದಿ ದೀಪ ಅಳವಡಿಸಲು ಕೋರಿ ಅರ್ಜಿ : 50 ಸಾವಿರ ದಂಡ ವಿಧಿಸಿದ ಹೈಕೋರ್ಟ್! - ಬೀದಿ ದೀಪ ಅಳವಡಿಸಲು ಕೋರಿ ಅರ್ಜಿ

ನೆಲಮಂಗಲದಿಂದ ತುಮಕೂರು ನಡುವಿನ 32 ಕಿ.ಮೀ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಆಕ್ಷೇಪಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರಿಗೆ ದಂಡ ವಿಧಿಸಿದೆ.

high-court-order-on-installing-street-lights
ಬೀದಿ ದೀಪ ಅಳವಡಿಸಲು ಕೋರಿ ಅರ್ಜಿ : 50 ಸಾವಿರ ದಂಡ ವಿಧಿಸಿದ ಹೈಕೋರ್ಟ್!

By

Published : Sep 23, 2021, 3:39 AM IST

ಬೆಂಗಳೂರು:ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32 ಕಿ.ಮೀ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಈ ಕುರಿತು ವಕೀಲ ರಮೇಶ್ ಎಲ್. ನಾಯ್ಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್.ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಜತೆಗೆ, ದಂಡದ ಮೊತ್ತವನ್ನು 30 ದಿನದಲ್ಲಿ ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿಸುವಂತೆ ಸೂಚಿಸಿದೆ.

ವಿಚಾರಣೆ ವೇಳೆ ಅರ್ಜಿಯಲ್ಲಿದ್ದ ಅಂಶಗಳನ್ನು ಪರಿಶೀಲಿಸಿದ ಪೀಠ, ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವುದನ್ನು ಪ್ರತಿಪಾದಿಸುವ ನಿಯಮಗಳ ಕುರಿತು ಅರ್ಜಿದಾರರು ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿಲ್ಲ.

ರಸ್ತೆಯಲ್ಲಿ ಟೋಲ್ ಸಂಗ್ರಹಣೆಯಿಂದ ವಿನಾಯಿತಿ ನೀಡುವಂತೆ ಟೋಲ್ ಸಂಸ್ಥೆಗೆ ಖುದ್ದು ಅರ್ಜಿದಾರರೇ ಮನವಿ ಮಾಡಿದ್ದಾರೆ. ಟೋಲ್ ಪಾವತಿ ವಿಚಾರದಲ್ಲಿ ತಮ್ಮ ಮೇಲೆ ಅಲ್ಲಿನ ಸಂಸ್ಥೆಯ ಸಿಬ್ಬಂದಿ ಗಲಾಟೆ ನಡೆಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಎಫ್‌ಐಆರ್ ದಾಖಲಾಗಿದೆ. ಈ ಅಂಶಗಳನ್ನು ಗಮನಿಸಿದರೆ ದ್ವೇಷದಿಂದ ಈ ಅರ್ಜಿ ಸಲ್ಲಿಸಿರುವುದು ಕಾಣುತ್ತಿದೆ ಎಂದಿತು.

ಈ ವೇಳೆ ಮಧ್ಯಪ್ರವೇಶಿಸಿದ ವಕೀಲ ರಮೇಶ್ ನಾಯಕ್ ತಾವು ಸ್ವ-ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿಲ್ಲ. ನಿಜವಾದ ಸಾರ್ವಜನಿಕ ಹಿತಾಸಕ್ತಿಯಿಂದಲೇ ಅರ್ಜಿ ದಾಖಲಿಸಲಾಗಿದೆ. ಅಗತ್ಯವಾದರೆ ಈ ಬಗ್ಗೆ ತನಿಖೆ ನಡೆಸಬಹುದು. ಸ್ವ-ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರುವುದು ಸಾಬೀತಾದರೆ 50 ಸಾವಿರ ರೂ. ದಂಡ ಬೇಕಾದರೂ ಪಾವತಿಸಲಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ಪೀಠ ದಂಡ ಮೊತ್ತವನ್ನು 25 ಸಾವಿರದಿಂದ 50 ಸಾವಿರ ರೂ.ಗೆ ಹೆಚ್ಚಿಸಿತು.

ಇದನ್ನೂ ಓದಿ:ಮಿಲಿಟರಿ ವೇಷ ಧರಿಸಿ ಗೂಢಚಾರಿಕೆ ಕೇಸ್​​: ಸೇನೆಗೆ ಸೇರಲು ವಿಫಲ ಯತ್ನ ನಡೆಸಿದ್ದ ಬಟ್ಟೆ ವ್ಯಾಪಾರಿ!

ABOUT THE AUTHOR

...view details