ಕರ್ನಾಟಕ

karnataka

By

Published : Mar 22, 2022, 6:38 AM IST

ETV Bharat / city

ಚೆಕ್​ ಬೌನ್ಸ್ ಕೇಸ್​ನಲ್ಲಿ ಮಧ್ಯಂತರ ಪರಿಹಾರ ಪಾವತಿ ಕಡ್ಡಾಯವಲ್ಲ: ಹೈಕೋರ್ಟ್

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವೇನಲ್ಲ. ಒಂದೊಮ್ಮೆ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸಲು ಮುಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

high court
ಹೈಕೋರ್ಟ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಚೆಕ್‌ ಬೌನ್ಸ್ ಪ್ರಕರಣದಲ್ಲಿ ಸಾಲ ಪಡೆದ ಮೊತ್ತದ ಪೈಕಿ ಶೇ.20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ತಮಗೆ ಸೂಚಿಸಿ ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಕೊಪ್ಪಳದ ಕುಷ್ಟಗಿ ನಿವಾಸಿ ವಿಜಯಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಸೋಮವಾರದಂದು ಈ ಆದೇಶ ಮಾಡಿದೆ.

ತೀರ್ಪಿನಲ್ಲೇನಿದೆ? ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರರಿಗೆ (ಸಾಲ ನೀಡಿದವರು) ಮಧ್ಯಂತರ ಪರಿಹಾರ ಪಾವತಿಸುವಂತೆ ಆರೋಪಿಗೆ (ಸಾಲ ಪಡೆದವರು) ಆದೇಶಿಸುವ ವಿವೇಚನಾಧಿಕಾರವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊಂದಿದೆ. ಆದರೆ, ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವೇನಲ್ಲ. ಒಂದೊಮ್ಮೆ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸಲು ಮುಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ:ನಷ್ಟ ವಸೂಲಿ ಕ್ಲೇಮ್ ಕಮಿಷನರ್​​ಗಳಿಗೆ ಮೂಲಸೌಕರ್ಯ ಒದಗಿಸದ ಸರ್ಕಾರ: ಹೈಕೋರ್ಟ್ ಅಸಮಾಧಾನ

ಪ್ರಕರಣದಲ್ಲಿ ಆರೋಪಿ ತಾನು ದೋಷಿ ಎಂದು ಒಪ್ಪಿಕೊಂಡಿಲ್ಲ. ಮತ್ತೊಂದೆಡೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆರೋಪಿಯನ್ನು ಸಾಲ ಮರು ಪಾವತಿಗೆ ಹೊಣೆಗಾರರನ್ನಾಗಿ ಮಾಡಿಲ್ಲ. ಹೀಗಿದ್ದೂ ದೂರುದಾರ ಶೇಖರಪ್ಪ ಅವರಿಂದ ಪಡೆದ ಎರಡು ಕೋಟಿ ರೂ. ಸಾಲದಲ್ಲಿ ಶೇ.20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿ ಮಾಡಬೇಕು ಎಂದು ಆರೋಪಿತರಗೆ ಜೆಎಂಎಫ್‌ಸಿ ಕೋರ್ಟ್ ಆದೇಶಿಸಲು ಸಕಾರಣಗಳನ್ನು ಉಲ್ಲೇಖಿಸಿಲ್ಲ. ಹಾಗಾಗಿ ಈ ಆದೇಶ ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣ:2020ರ ಡಿಸೆಂಬರ್‌ನಲ್ಲಿ ವ್ಯಾಪಾರ ನಿಮಿತ್ತ ವಿಜಯಾ ಎಂಬುವರು ಶೇಖರಪ್ಪ ಎಂಬುವರಿಂದ ಎರಡು ಕೋಟಿ ರೂಪಾಯಿ ನಗದನ್ನು ಸಾಲವಾಗಿ ಪಡೆದಿದ್ದು, ಭದ್ರತಾ ಖಾತರಿಯಾಗಿ ಎರಡು ಚೆಕ್ ನೀಡಿದ್ದರು ಎನ್ನಲಾಗಿದೆ. ಆದರೆ, ನಿಗದಿತ ಅವಧಿಯಲ್ಲಿ ಹಣ ನೀಡದಿದ್ದಾಗ ಶೇಖರಪ್ಪ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಲಯವು 2021ರ ಜೂ.1ರಂದು ಸಾಲದ ಹಣದ ಪೈಕಿ ಶೇ.20ರಷ್ಟು ಅಂದರೆ 40ಲಕ್ಷ ರೂ.ಗಳನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ವಿಜಯಾ ಎಂಬುವರಿಗೆ ಆದೇಶಿಸಿತ್ತು.

ABOUT THE AUTHOR

...view details