ಬೆಂಗಳೂರು:ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಹಿಳಾ ಟೇಬಲ್ ಟೆನಿಸ್ ತಂಡದ ಆಯ್ಕೆ ಪಟ್ಟಿ ನೀಡುವುದಕ್ಕೆ ಹೈಕೋರ್ಟ್ ತಡೆಯೊಡ್ಡಿದೆ. ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ) ಮಹಿಳಾ ತಂಡದ ಆಟಗಾರರ ಹೆಸರು ನೀಡದಂತೆ ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಕಾಮನ್ ವೆಲ್ತ್ ಕ್ರೀಡಾಕೂಟ ಪಂದ್ಯದಲ್ಲಿ ಭಾಗವಹಿಸುವ ಎಲ್ಲಾ ಅರ್ಹತೆ ಇದ್ದರೂ ಮಹಿಳಾ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡದಿರುವ ಕ್ರಮ ಪ್ರಶ್ನಸಿ ಪ್ರಸಿದ್ದ ಟೆಬಲ್ ಟೆನಿಸ್ ಆಟಗಾರ್ತಿ ಬೆಂಗಳೂರಿನ ಅರ್ಚನಾ ಕಾಮತ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಇದೇ ಜುಲೈ - ಆಗಸ್ಟ್ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್-2022ಕ್ಕೆ ಭಾರತದ ಟೇಬಲ್ ಟೆನಿಸ್ ಮಹಿಳಾ ತಂಡಕ್ಕೆ ಆಟಗಾರರ ಹೆಸರನ್ನು ಶಿಫಾರಸು ಟಿಟಿಎಫ್ಐ ಮಾಡಿರುವುದಕ್ಕೆ ಅರ್ಚನಾ ಕಾಮತ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್ ದಿನೇಶ್ ಕುಮಾರ್ ಮತ್ತು ಸಿ.ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಈ ಬಗ್ಗೆ ಮುಂದಿನ ವಿಚಾರಣೆಯವರೆಗೆ ಆಯ್ಕೆ ಪಟ್ಟಿ ರವಾನಿಸದಂತೆ ಭಾರತೀಯ ಟೇಬಲ್ ಟೆನಿಸ್ ಒಕ್ಕೂಟಕ್ಕೆ (ಟಿಟಿಎಫ್‌ಐ) ಆದೇಶ ನೀಡಿದೆ. ಮಾಜಿ ಅಡ್ವೊಕೇಟ್ ಜನರಲ್ ಆದ ಹಿರಿಯ ವಕೀಲ ಉದಯ್ ಹೊಳ್ಳ ಅವರು ಅರ್ಜಿದಾರರಾದ ಅರ್ಚನಾ ಕಾಮತ್ ಪರ ವಾದಿಸಿ , ಮಹಿಳಾ ಡಬಲ್ಸ್ ವಿಭಾಗದಲ್ಲಿ ವಿಶ್ವದಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದರೂ ಅರ್ಚನಾರನ್ನು ಭಾರತ ತಂಡದಿಂದ ಕೈಬಿಡಲಾಗಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.
ಓದಿ:ಚಿಕಿತ್ಸೆಗಾಗಿ ಕೆ.ಎಲ್.ರಾಹುಲ್ ಜರ್ಮನಿಗೆ; ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯ
ಟಿಟಿಎಫ್‌ಐ ಜೂನ್ 6ರಂದು ಮಾಡಿರುವ ಶಿಫಾರಸಿನಲ್ಲಿ ದಿಯಾ ಪರಾಗ್ ಚಿತಾಲೆರನ್ನು ದೇಶೀಯ ಕ್ರೀಡಾಕೂಟದಲ್ಲಿನ ಉತ್ತಮ ಪ್ರದರ್ಶನ ಆಧರಿಸಿ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದೆ. ದಿಯಾ ಪರಾಗ್ ಚಿತಾಲೆ ಅವರು ದೇಶೀಯ ಟೂರ್ನಿಯಲ್ಲಿ 3ನೇ ಶ್ರೇಯಾಂಕ ಹೊಂದಿದ್ದಾರೆ. ನಾವು ದೇಶೀಯ ಟೂರ್ನಿಯಲ್ಲಿ ಹೆಚ್ಚು ಆಡದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹೆಚ್ಚು ಗಮನಹರಿಸಿರುವುದರಿಂದ ದೇಶೀಯ ಶ್ರೇಣಿಯಲ್ಲಿ 37ನೇ ಶ್ರೇಯಾಂಕ ಹೊಂದಿದ್ದೇನೆ.
ಅದೇ ರೀತಿ ಮನಿಕಾ ಬಾತ್ರಾ ಸಹ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ದೇಶೀಯ ಟೂರ್ನಿಯಲ್ಲಿ 33ನೇ ಸ್ಥಾನವನ್ನು ಹೊಂದಿದ್ದಾರೆ. ನಮ್ಮಿಬ್ಬರ ಅಂತಾರಾಷ್ಟ್ರೀಯ ಟೂರ್ನಿಗಳ ಉತ್ತಮ ಪ್ರದರ್ಶನ ಹಾಗೂ ಅಲ್ಲಿನ ಶ್ರೇಯಾಂಕ ಆಧಾರದಲ್ಲಿ ನಮ್ಮಿಬ್ಬರನ್ನು ಪದಕ ಗೆಲ್ಲುವ ದೃಷ್ಟಿಯಿಂದ ಮೊದಲು ತಂಡದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ತಮ್ಮನ್ನು ಮಾತ್ರ ದೇಶೀಯ ಶ್ರೇಯಾಂಕ ಆಧಾರದಲ್ಲಿ ಕೈಬಿಡಲಾಗಿದ್ದು, ಇದು ಅನ್ಯಾಯ ಹಾಗೂ ಅಸಮರ್ಥನೀಯ ಎಂದು ಅರ್ಚನಾ ಕಾಮತ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ತಮ್ಮ ಹೆಸರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಷ್ಟೇ ಅಲ್ಲ ಆಯ್ಕೆ ಸಮಿತಿಯು ಭಾರತವನ್ನು ಪ್ರತಿನಿಧಿಸುವ ಆಟಗಾರ್ತಿ ಎಂದೂ ಸಹ ಶಾರ್ಟ್ ಲಿಸ್ಟ್ನಲ್ಲಿ ಖಾತರಿ ಪಡಿಸಿತ್ತು. ನಂತರ ತಾಂತ್ರಿಕ ಕಾರಣಗಳನ್ನು ನೀಡಿ ಟಿಟಿಎಫ್‌ಐ ತಮ್ಮ ಹೆಸರನ್ನು ತೆಗೆದು ಹಾಕಿ, ದಿವ್ಯಾ ಪರಾಗ್ ಚಿತಾಲೆ ಅವರ ಹೆಸರನ್ನು ಸೇರ್ಪಡೆ ಮಾಡಿದೆ.
ಅರ್ಚನಾ ಮತ್ತು ಮನಿಕಾ ಬಾತ್ರಾ ಜೋಡಿಯು ಡಬಲ್ಸ್ ವಿಭಾಗದಲ್ಲಿ ದೇಶಕ್ಕೆ ಪದಕ ತಂದು ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಮೊದಲು ಟಿಟಿಎಫ್‌ಐ ಉಲ್ಲೇಖಿಸಿತ್ತು. ಆದರೆ, ಅಪ್ರಸ್ತುತ ಮತ್ತು ತರ್ಕಹೀನವಾದ ಮಾನದಂಡಗಳ ಅನ್ವಯ ತಮ್ಮ ಹೆಸರನ್ನು ಕೈಬಿಡಲಾಗಿದೆ. ತಮ್ಮನ್ನು ತಂಡದಿಂದ ಕೈಬಿಟ್ಟಿರುವುದು ಹತಾಶೆಗೊಳ್ಳುವಂತೆ ಮಾಡಿದೆ ಎಂದು ಅರ್ಚನಾ ಅರ್ಜಿಯಲ್ಲಿ ವಿವರಿಸಿದ್ದಾರೆ.
ಅರ್ಜಿಯಲ್ಲಿ ಪ್ರತಿವಾದಿಗಳಾದ ಭಾರತೀಯ ಟೇಬಲ್ ಟೆನಿಸ್ ಒಕ್ಕೂಟ, ಭಾರತೀಯ ಕ್ರೀಡಾ ಪ್ರಾಧಿಕಾರ, ಮಹಿಳಾ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೀಜಾ ಅಕುಲಾ, ರೀತ್ ರಿಷ್ಯಾ ಟೆನ್ನಿಸನ್, ಮನಿಕಾ ಬಾತ್ರಾ, ದಿಯಾ ಪರಾಗ್ ಚಿತಾಲೆ, ಸ್ವಸ್ತಿಕ್ ಘೋಷ್ ಅವರಿಗೆ ಇ-ಮೇಲ್ ಮೂಲಕ ತುರ್ತು ನೋಟಿಸ್ ಜಾರಿ ಮಾಡಲು ಹೈಕೋರ್ಟ್ ಆದೇಶಿಸಿದೆ. ಟಿಟಿಎಫ್‌ಐ ಮುಂದಿನ ವಿಚಾರಣೆಯವರೆಗೆ ಆಟಗಾರರ ಆಯ್ಕೆ ಪಟ್ಟಿಯನ್ನು ಕಳುಹಿಸಬಾರದು ಎಂದು ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದ್ದು, ಜೂನ್ 22ಕ್ಕೆ ವಿಚಾರಣೆ ಮುಂದೂಡಿದೆ.